ನವದೆಹಲಿ: ರಾಜಧಾನಿಯನ್ನು ಸಂಪೂರ್ಣ ಒತ್ತೆಯಾಳಾಗಿಟ್ಟುಕೊಳ್ಳಲು ಯೋಜಿಸಲಾಗಿದ್ದ ಪ್ರತಿಭಟನೆಯು ಸಂಪೂರ್ಣ 'ಫ್ಲಾಪ್ ಶೋ' ಆಗಿದೆ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಹೇಳಿದ್ದಾರೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜಂತರ್ ಮಂತರ್ನಲ್ಲಿ ಏನು ನಡೆಯುತ್ತಿದೆಯೋ ಮತ್ತು ಟಿವಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಏನು ತೋರಿಸಲಾಗುತ್ತಿದೆಯೋ ಅದು ಭಾರತದ ನಿಜವಾದ ಚಿತ್ರಣವಲ್ಲ.
ದೇಶವು ಶಾಂತಿಯುತವಾಗಿದೆ ಮತ್ತು ಉತ್ತಮ ಆಡಳಿತದೊಂದಿಗೆ ಮುನ್ನಡೆಯುತ್ತಿದೆ' ಎಂದು ಹೇಳಿದ್ದಾರೆ.
ಪ್ರತಿಭಟನೆಯ ವೇಳೆ ಹಿಂಸಾಚಾರ, ದೈಹಿಕ ಘರ್ಷಣೆಗಳು ಮತ್ತು ಬೀದಿ ಜಗಳಗಳನ್ನು ಪ್ರಚೋದಿಸಲು ಯತ್ನಿಸಲಾಯಿತು. ಆದರೆ ಅದು ಸಂಪೂರ್ಣ ಫ್ಲಾಪ್ ಶೋ ಆಗಿದೆ. ಜಂತರ್ ಮಂತರ್ ಪ್ರತಿಭಟನಾ ಸ್ಥಳದತ್ತ ತೆರಳುತ್ತಿದ್ದ ನೂರಾರು ಯುವ ಜನರು ಮತ್ತು ಹಲವಾರು ರಾಜಕಾರಣಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು, 'ಗುಂಪುಗಾರಿಕೆ ವಿರುದ್ಧ ಪ್ರಜಾಪ್ರಭುತ್ವ ಸಾಧಿಸಿದ ಗೆಲುವು' ಎಂದು ಬಣ್ಣಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶದಲ್ಲಿ ಅರಾಜಕತೆಯನ್ನು ಹರಡುತ್ತಿದ್ದಾರೆ. ಅವರು ನಾಲಾಯಕ್ ನಾಯಕ. ಶುಕ್ರವಾರ(ಅ.9) ನಡೆದ ಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂಡಿಯಾ ಒಕ್ಕೂಟದ ಮತ ಕಳವು ಆರೋಪವನ್ನು ನಿರಾಕರಿಸಲಿಲ್ಲ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ.
ಮತಗಳ್ಳತನ ಮತ್ತು ಎಸ್ಐಆರ್ ವೇಳೆ ಅಕ್ರಮ ನಡೆದಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಮತ್ತು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನೆಯನ್ನು ನಿಯಂತ್ರಿಸಲು ದೆಹಲಿಯಲ್ಲಿ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

