ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆರಡು ದಿನ ವಿಸ್ತರಿಸಿದ ಬೆನ್ನಲ್ಲೇ, ಅವರ ವಿರುದ್ಧ ದಾಖಲಾಗಿರುವ ಅತಿಕ್ರಮ ಪ್ರವೇಶ ಪ್ರಕರಣವನ್ನು ದೆಹಲಿ ಪೊಲೀಸರು ಕ್ರೈಮ್ ಬ್ರಾಂಚ್ ವಿಭಾಗಕ್ಕೆ ವರ್ಗಾಯಿಸಿದ್ದಾರೆ.
ಸಿಜೆಪಿ ನಾಯಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223ರಎ (ಸಾರ್ವಜನಿಕವಾಗಿ ಹೊರಡಿಸಿದ ಆದೇಶವನ್ನು ಪಾಲಿಸಲು ನಿರಾಕರಿಸುವುದು), 332 (ಅಪರಾಧ ಎಸಗುವ ಉದ್ದೇಶದಿಂದ ಮನೆ ಅಥವಾ ಆವರಣದೊಳಗೆ ಅತಿಕ್ರಮ ಪ್ರವೇಶ) ಮತ್ತು 61(2) (ಅಪರಾಧ ಸಂಚು) ಅಡಿಯಲ್ಲಿ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದರ ಜೊತೆಗೆ, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಕ್ರೈಮ್ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಪ್ರತಿಭಟನಾ ಸ್ಥಳದ ಸ್ಥಾನಮಾನ ಕಿತ್ತು ಹಾಕಿದ ಕಾರಣಕ್ಕೆ ಜಂತರ್ ಮಂತರ್‌ಗೆ ನುಗ್ಗಿ ದಾಸ್, ರಾಂಕಾ ಮತ್ತಿತರರು ಅ. 13ರಂದು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

