ನವದೆಹಲಿ: ಆರು ತಿಂಗಳವರೆಗಿನ ಶಿಶುಗಳಿಗೆ ನೀಡುವ ಆಹಾರ ಉತ್ಪನ್ನಗಳಿಗೆ ಸುಕ್ರೋಸ್ ಅಥವಾ ಫ್ರುಕ್ಟೋಸ್ ಸೇರ್ಪಡೆ ಮಾಡುವುದನ್ನು ನಿಷೇಧಿಸುವ ಪ್ರಸ್ತಾವವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರ (FSSAI) ಮಂಡಿಸಿದೆ.
ಶಿಶುಗಳ ಪೌಷ್ಟಿಕಾಂಶ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ ಈ ಪ್ರಸ್ತಾವವನ್ನು ರೂಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ FSSAI, ಆರು ತಿಂಗಳವರೆಗಿನ ಶಿಶುಗಳ ಆಹಾರ ಉತ್ಪನ್ನಗಳಿಗೆ ಸುಕ್ರೋಸ್ ಮತ್ತು ಫ್ರುಕ್ಟೋಸ್ ಸೇರ್ಪಡೆಗೆ ನಿರ್ಬಂಧ ವಿಧಿಸುವ ಮೂಲಕ ಪೌಷ್ಟಿಕಾಂಶ ಮಾನದಂಡಗಳನ್ನು ಬಲಪಡಿಸಲು ಪ್ರಸ್ತಾವಿಸಲಾಗಿದೆ ಎಂದು ತಿಳಿಸಿದೆ.
ಚಿಕ್ಕ ವಯಸ್ಸಿನಲ್ಲೇ ಶಿಶುಗಳು ಸೇರ್ಪಡೆ ಮಾಡಿದ ಸಕ್ಕರೆಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದು ಈ ಕರಡು ತಿದ್ದುಪಡಿಯ ಉದ್ದೇಶವಾಗಿದೆ ಎಂದು ಪ್ರಕಟಣೆ ತಿಳಿಸಿದೆ.



