ನವದೆಹಲಿ: ಗುಜರಾತ್ ಸಮಾನ ನಾಗರಿಕ ಸಂಹಿತೆ (UCC), 2026 ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 17ರಂದು ಅಂಕಿತ ಹಾಕಿದ್ದಾರೆ. ಇದರೊಂದಿಗೆ ಗುಜರಾತ್ನಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಲು ಅಗತ್ಯವಿದ್ದ ಸಾಂವಿಧಾನಿಕ ಪ್ರಕ್ರಿಯೆ ಪೂರ್ಣಗೊಂಡಿದೆ.
ಉತ್ತರಾಖಂಡದ ಬಳಿಕ ಸಮಾನ ನಾಗರಿಕ ಸಂಹಿತೆ ಕಾಯ್ದೆಯನ್ನು ಜಾರಿಗೆ ತರಲಿರುವ ದೇಶದ ಎರಡನೇ ರಾಜ್ಯವಾಗಿ ಗುಜರಾತ್ ಗುರತಿಸಿಕೊಳ್ಳಲಿದೆ.
ಗುಜರಾತ್ ಸರಕಾರ ಅಕ್ಟೋಬರ್ 1ರಂದು ಹೊರಡಿಸಿರುವ ಅಸಾಧಾರಣ ಗೆಜೆಟ್ ಅಧಿಸೂಚನೆಯಲ್ಲಿ ಈ ಮಾಹಿತಿ ನೀಡಲಾಗಿದೆ. ರಾಷ್ಟ್ರಪತಿಯ ಅಂಕಿತದ ಬಳಿಕ ಮಸೂದೆಯನ್ನು 'ಗುಜರಾತ್ ಕಾಯ್ದೆ ಸಂಖ್ಯೆ 15, 2026' ಎಂದು ಅಧಿಸೂಚಿಸಲಾಗಿದೆ. ರಾಜ್ಯ ಸರಕಾರ ಗೆಜೆಟ್ ನಲ್ಲಿ ಪ್ರತ್ಯೇಕ ಅಧಿಸೂಚನೆ ಹೊರಡಿಸಿ ನಿಗದಿಪಡಿಸುವ ದಿನಾಂಕದಿಂದ ಕಾಯ್ದೆ ಜಾರಿಗೆ ಬರಲಿದೆ.
►ಏಳು ಗಂಟೆಗೂ ಹೆಚ್ಚು ಚರ್ಚೆ
ಗುಜರಾತ್ ವಿಧಾನಸಭೆಯಲ್ಲಿ ಏಳು ಗಂಟೆಗೂ ಹೆಚ್ಚು ಕಾಲ ನಡೆದ ಸುದೀರ್ಘ ಚರ್ಚೆಯ ಬಳಿಕ ಮಾರ್ಚ್ 24ರಂದು ಸಮಾನ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿ ನೀಡಿದ ವರದಿಯ ಆಧಾರದಲ್ಲಿ ಮಸೂದೆಯನ್ನು ರೂಪಿಸಲಾಗಿತ್ತು.

