ನವದೆಹಲಿ: ಈಗಾಗಲೇ ದುರ್ಬಲಗೊಳ್ಳುತ್ತಿರುವ ರೂಪಾಯಿಯು ಪ್ರಬಲ ಅಮೆರಿಕದ ಡಾಲರ್, ಆಮದು ವೆಚ್ಚಗಳು, ಅಸ್ಥಿರ ಬಂಡವಾಳ ಹರಿವು ಮತ್ತು ವ್ಯಾಪಾರ ನೀತಿಯ ಅನಿಶ್ಚಿತತೆಗಳಿಂದಾಗಿ ಮತ್ತಷ್ಟು ಹಿನ್ನಡೆಯನ್ನು ಎದುರಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಇತ್ತೀಚಿನ ಹಣಕಾಸು ನೀತಿ ವರದಿಯಲ್ಲಿ ಎಚ್ಚರಿಕೆ ನೀಡಿದೆ.
ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ತೀವ್ರಗೊಂಡರೆ ಅಥವಾ ಪ್ರಮುಖ ಕೇಂದ್ರ ಬ್ಯಾಂಕುಗಳು ಅನಿರೀಕ್ಷಿತವಾಗಿ ಕಠಿಣ ಹಣಕಾಸು ನೀತಿಯನ್ನು ಜಾರಿಗೆ ತಂದರೆ, ಅದೂ ರೂಪಾಯಿಯ ಮೇಲೆ ಹೆಚ್ಚಿನ ಒತ್ತಡ ಹೇರಲಿದೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ರೂಪಾಯಿ ಮೌಲ್ಯವು ಶೇ.5ರಷ್ಟು ಕುಸಿದರೆ, ಹಣದುಬ್ಬರವು ಸುಮಾರು 40 ಮೂಲಾಂಕಗಳಷ್ಟು ಹೆಚ್ಚಾಗಬಹುದು.
ಆರ್‌ಬಿಐನ ಇತ್ತೀಚಿನ ಶೇ.0.25ರಷ್ಟು ರೆಪೊ ದರ ಏರಿಕೆಯು ರೂಪಾಯಿ ಮೌಲ್ಯವನ್ನು ಹೆಚ್ಚಿಸುವಲ್ಲಿ ವಿಫಲವಾಗಿದೆ. ಏಕೆಂದರೆ, ಈ ಏರಿಕೆಯನ್ನು ಮಾರುಕಟ್ಟೆಯು ಮೊದಲೇ ನಿರೀಕ್ಷಿಸಿತ್ತು ಎಂದು ಸಿಆರ್ ಫಾರೆಕ್ಸ್ ಅಡ್ವೈಸರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಪಬಾರಿ ಹೇಳಿದರು.
2026ರ ಕ್ಯಾಲೆಂಡರ್ ವರ್ಷದಲ್ಲಿ ರೂಪಾಯಿ ಮೌಲ್ಯವು ಸುಮಾರು ಶೇ.7.5ರಷ್ಟು ಕುಸಿದಿದ್ದು, ಪ್ರಸಕ್ತ ವಿತ್ತವರ್ಷದಲ್ಲಿ ಸುಮಾರು ಶೇ.3.9ರಷ್ಟು ಕುಸಿದು, ಅಮೆರಿಕದ ಡಾಲರ್ ಎದುರು 90ರಿಂದ ಸುಮಾರು 96.75ಕ್ಕೆ ಇಳಿದಿದೆ ಎಂದು ಅವರು ಹೇಳಿದರು. ರೆಪೊ ದರವನ್ನು ಶೇ.0.50ರಷ್ಟು ಹೆಚ್ಚಿಸಿದ್ದರೆ ಅದು ರೂಪಾಯಿ ಮೌಲ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದಿತ್ತು ಎಂದರು.
ರೂಪಾಯಿ ಏಷ್ಯಾದಲ್ಲೇ ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿರುವ ಕರೆನ್ಸಿಯಾಗಿದ್ದು, ಪ್ರತಿ ಡಾಲರ್‌ಗೆ 100 ರೂಪಾಯಿ ಅಥವಾ ಅದಕ್ಕಿಂತಲೂ ಕೆಳಕ್ಕೆ ಕುಸಿಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಇಳಿಕೆ
ಅಕ್ಟೋಬರ್ 2ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 12.95 ಶತಕೋಟಿ ಡಾಲರ್‌ನಷ್ಟು ಕುಸಿದು 734.60 ಶತಕೋಟಿ ಡಾಲರ್‌ಗೆ ತಲುಪಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಆರ್‌ಬಿಐ ಶುಕ್ರವಾರ ಬಿಡುಗಡೆಗೊಳಿಸಿದ ದತ್ತಾಂಶಗಳ ಪ್ರಕಾರ, ವಿದೇಶಿ ಕರೆನ್ಸಿ ಆಸ್ತಿಗಳು ಮತ್ತು ಚಿನ್ನದ ಮೀಸಲು ಕಡಿಮೆಯಾಗಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಸೆಪ್ಟೆಂಬರ್ 25ಕ್ಕೆ ಕೊನೆಗೊಂಡ ವರದಿ ವಾರದಲ್ಲಿ ವಿದೇಶಿ ವಿನಿಮಯ ಮೀಸಲು 18.34 ಶತಕೋಟಿ ಡಾಲರ್‌ನಷ್ಟು ಕುಸಿದು 747.56 ಶತಕೋಟಿ ಡಾಲರ್‌ಗೆ ತಲುಪಿತ್ತು.
ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಅಮೆರಿಕದ ಖಜಾನೆ ಬಾಂಡ್‌ಗಳ ಇಳುವರಿಯ ನಡುವೆಯೇ ರೂಪಾಯಿ ಮೌಲ್ಯ ಕುಸಿತ ಹಾಗೂ ವಿದೇಶಿ ವಿನಿಮಯ ಮೀಸಲಿನಲ್ಲಿ ಇಳಿಕೆ ಕಂಡುಬಂದಿದ್ದು, ಆರ್‌ಬಿಐ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಲು ಕಾರಣವಾಗಿವೆ.



