HEALTH TIPS

ಯಾರೂ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ: ರಾಹುಲ್, ಅಖಿಲೇಶ್‌ಗೆ SC ನೋಟಿಸ್

ನವದೆಹಲಿ: ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಭಾರಿ ಅಕ್ರಮ ನಡೆದಿದೆ ಮತ್ತು ಬೃಹತ್‌ ಸಂಖ್ಯೆಯ ಮತದಾರರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ವಿಪಕ್ಷಗಳ ಹಲವು ಮುಖಂಡರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಿಚಾರಣೆ ನಡೆಸಿತು. 


ದೇಶದಾದ್ಯಂತ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಪ್ರಶ್ನಿಸಿ ಅಕ್ಟೋಬರ್ 12ರಂದು ಅರ್ಜಿ ಸಲ್ಲಿಸಿದ್ದ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ 13 ಮಂದಿ ಅರ್ಜಿದಾರರ ನಡವಳಿಕೆ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಅವರಿದ್ದ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು 'ಯಾರೂ ನ್ಯಾಯಾಲಯವನ್ನು ಬೆದರಿಸಲು ಸಾಧ್ಯವಿಲ್ಲ' ಎಂದು ಮೌಖಿಕವಾಗಿ ಹೇಳಿದರು.

'ನಾವು ದಂತದ ಗೋಪುರಗಳಲ್ಲಿ ಕುಳಿತಿಲ್ಲ. ಅವರು ಹೊರಗೆ ಯಾವ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ನ್ಯಾಯಾಲಯದಲ್ಲಿ ಏನು ಹೇಳುತ್ತಾರೆ ಎಂಬುದು ನಮಗೆ ತಿಳಿದಿದೆ' ಎಂದು ಸೂರ್ಯ ಕಾಂತ್ ಉಲ್ಲೇಖಿಸಿದ್ದಾರೆ.

ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ, ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಮೂರ್ತಿಗಳು, 'ಮುಂದಿನ ವಿಚಾರಣೆಯ ದಿನದಂದು ಪ್ರತಿಭಟನಾ ಮೆರವಣಿ ವೇಳೆ ತಾವು ನಡೆದುಕೊಂಡು ರೀತಿ ಸರಿ ಇತ್ತೇ ಎಂದು ನಾವು ಅರ್ಜಿದಾರರೊಬ್ಬರನ್ನು ಪ್ರಶ್ನಿಸುತ್ತೇವೆ' ಎಂದಿದ್ದಾರೆ.

ಪೋಲಿಸ್ ದೌರ್ಜನ್ಯ, ಪ್ರತಿಭಟನಾ ತಾಣವಾಗಿ ಜಂತರ್ ಮಂತರ್‌ನ ಮಾನ್ಯತೆ ರದ್ದುಪಡಿಸಿರುವುದು ಮತ್ತು ಎಸ್‌ಐಆರ್ ಅನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ, ಕೇಂದ್ರ ಸರ್ಕಾರ, ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರಿಗೂ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೋರಿದೆ.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಹಾಗೂ ಪ್ರಕ್ರಿಯೆಯಲ್ಲಿ ಮಾಡಿರುವ ಬದಲಾವಣೆಗಳ ಕುರಿತು ಪರಿಶೀಲಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಬೇಕು. ತಾಂತ್ರಿಕ ತಜ್ಞರು, ಗಣ್ಯರನ್ನು ಒಳಗೊಂಡ ಈ ಸಮಿತಿಗೆ ಕಾಲಮಿತಿಯಲ್ಲಿ ಪರಿಶೀಲಿಸುವಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್‌ 10ರಂದು ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ದೆಹಲಿಯಲ್ಲಿ ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಿರುವುದು, ರೈಲುಗಳ ಸಂಚಾರ ರದ್ದುಗೊಳಿಸಿರುವ ವಿಷಯಗಳ ಕುರಿತೂ ಸುಪ್ರೀಂ ಕೋರ್ಟ್‌ ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries