ಶ್ರೀನಗರ: ಜೈಲಿನಲ್ಲಿರುವ ಉಗ್ರರಿಗೆ ಮತ್ತು ಅವರ ಸಹಚರರಿಗೆ ಹಣಕಾಸು ನೆರವು ಒದಗಿಸುತ್ತಿದ್ದ ಲಷ್ಕರ್-ಎ-ತೈಯ್ಬಾ (LeT) ಹಾಗೂ ಅದರ ಅಂಗಸಂಸ್ಥೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಉಗ್ರ ಜಾಲವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೇಧಿಸಿದ್ದಾರೆ. ದಕ್ಷಿಣ ಕಾಶ್ಮೀರದ ಶೋಪಿಯಾನ್, ಪುಲ್ವಾಮಾ ಮತ್ತು ಕಥುವಾ ಜಿಲ್ಲೆಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು 10 ಮಂದಿ ಉಗ್ರ ಸಹಚರರನ್ನು ಬಂಧಿಸಿವೆ.
ಆನ್‌ಲೈನ್ ಪೇಮೆಂಟ್ ಆ್ಯಪ್‌ಗಳ ಮೂಲಕ ನಡೆದ ಸಂಶಯಾಸ್ಪದ ಹಣಕಾಸು ವಹಿವಾಟುಗಳನ್ನು ಬೆನ್ನಟ್ಟಿದ ತನಿಖಾಧಿಕಾರಿಗಳಿಗೆ ಈ ಉಗ್ರ ನಿಧಿ ಜಾಲದ ಮಾಹಿತಿ ಬೆಳಕಿಗೆ ಬಂದಿದೆ. ಸಾರ್ವಜನಿಕರಿಂದ ಸುಳ್ಳು ನೆಪಗಳನ್ನು ಮುಂದಿಟ್ಟು ದೇಣಿಗೆ ಹೆಸರಿನಲ್ಲಿ ಹಣ ಸಂಗ್ರಹಿಸಿ, ಬಳಿಕ ಅದನ್ನು ವ್ಯವಸ್ಥಿತವಾಗಿ ಉಗ್ರ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನಲ್ಲಿರುವ ಉಗ್ರ ಕಮಾಂಡರ್‌ಗಳು ಹೊರಗಿನ ಸಂಪರ್ಕ ಉಳಿಸಿಕೊಳ್ಳಲು ರಹಸ್ಯವಾಗಿ ಸ್ಮಾರ್ಟ್‌ಫೋನ್‌ಗಳನ್ನು ತಲುಪಿಸಲು ಹಾಗೂ ಜೈಲಿನ ಒಳಗಿಂದಲೇ ಭಯೋತ್ಪಾದಕ ಕಾರ್ಯಾಚರಣೆಗಳನ್ನು ನಿಯಂತ್ರಿಸಲು ಈ ಹಣವನ್ನು ವ್ಯಯಿಸಲಾಗುತ್ತಿತ್ತು ಎಂಬುದು ತನಿಖೆಯಿಂದ ದೃಢಪಟ್ಟಿದೆ. ಜಾಲದ ವಿಸ್ತೃತ ಆಯಾಮಗಳ ಕುರಿತು ಶೋಧ ಮುಂದುವರಿದಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆಯಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.



