ನವದೆಹಲಿ: ಉದ್ಭವಿಸುತ್ತಿರುವ ನೂತನ ರಕ್ಷಣಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಂಶೋಧನೆ ಹಾಗೂ ತಾಂತ್ರಿಕ ಪ್ರಗತಿಗಳನ್ನು ನೈಜ ರಕ್ಷಣಾ ಪರಿಹಾರಗಳನ್ನಾಗಿ ಪರಿವರ್ತಿಸುವುದು ಇಂದಿನ ತುರ್ತು ಅಗತ್ಯ ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಕರೆ ನೀಡಿದ್ದಾರೆ.
ಡಿಆರ್‌ಡಿಒ ಮತ್ತು ಸೆಂಟರ್ ಫಾರ್ ಜಾಯಿಂಟ್ ವಾರ್‌ಫೇರ್ ಸ್ಟಡೀಸ್ ವತಿಯಿಂದ ನವದೆಹಲಿಯ ಮಾಣೆಕ್‌ಶಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ‘VISV-2026’ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ವಿಕಸಿತ ಭಾರತ’ದ ಗುರಿ ಸಾಧನೆಗೆ ಸ್ವಾವಲಂಬಿ ರಕ್ಷಣಾ ಪರಿಸರ ವ್ಯವಸ್ಥೆ ಬುನಾದಿಯಾಗಿದೆ ಎಂದ ಸಚಿವರು, ‘ಆತ್ಮನಿರ್ಭರ ಭಾರತ’ ಉಪಕ್ರಮವು ದೇಶೀಯ ಸಂಶೋಧನೆ, ವಿನ್ಯಾಸ ಹಾಗೂ ಉತ್ಪಾದನೆಯನ್ನು ಸಶಕ್ತಗೊಳಿಸಿ, ಜಾಗತಿಕ ಪಾಲುದಾರಿಕೆಗೆ ಹೊಸ ಬಲ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ರಕ್ಷಣಾ ತಂತ್ರಜ್ಞಾನಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಅರೇಬಿಕ್, ಸ್ಪ್ಯಾನಿಷ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ಸಿದ್ಧಪಡಿಸಲಾದ ಡಿಆರ್‌ಡಿಒ ಉತ್ಪನ್ನಗಳ ವಿವರಣಾತ್ಮಕ ಸಂಕಲನವನ್ನು ಬಿಡುಗಡೆ ಮಾಡಲಾಯಿತು.
ಸಮಾವೇಶದಲ್ಲಿ ಭಾಗವಹಿಸಿದ್ದ ರಕ್ಷಣಾ ಉತ್ಪಾದನಾ ಕಾರ್ಯದರ್ಶಿ ಸಂಜೀವ್ ಕುಮಾರ್ ಅವರು, 2027ರಲ್ಲಿ ಬೆಂಗಳೂರಿನಲ್ಲಿ ಜರುಗಲಿರುವ ಪ್ರತಿಷ್ಠಿತ ‘ಏರೋ ಇಂಡಿಯಾ’ ಪ್ರದರ್ಶನಕ್ಕೆ ವಿದೇಶಿ ರಕ್ಷಣಾ ನಿಯೋಗಗಳನ್ನು ಅಧಿಕೃತವಾಗಿ ಆಹ್ವಾನಿಸಿದರು. ಕಾರ್ಯಕ್ರಮದಲ್ಲಿ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹಾಗೂ ಮಿತ್ರ ರಾಷ್ಟ್ರಗಳ ಹಿರಿಯ ರಕ್ಷಣಾ ಅಟ್ಯಾಶೆಗಳು ಪಾಲ್ಗೊಂಡಿದ್ದರು.



