7,000ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳಿಗೆ ನೆರವಾಗಿದ್ದ ನೌಕೆ; ಇಂಡೋನೇಷ್ಯಾದ ಸುಮಾತ್ರಾ ಆಗಸದಲ್ಲಿ ಪತನ
ವಾಷಿಂಗ್ಟನ್: ಬ್ರಹ್ಮಾಂಡದ ಅತ್ಯಂತ ಪ್ರಬಲ ಶಕ್ತಿ ಸ್ಫೋಟಗಳ ಕುರಿತು ಎರಡು ದಶಕಗಳಿಗೂ ಹೆಚ್ಚು ಕಾಲ ಅಧ್ಯಯನ ನಡೆಸಿದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಖ್ಯಾತ 'ಸ್ವಿಫ್ಟ್' (Swift) ಉಪಗ್ರಹವು ಭೂಮಿಯ ವಾತಾವರಣವನ್ನು ಪ್ರವೇಶಿಸಿ ಸುಟ್ಟು ಭಸ್ಮವಾಗಿದೆ.
ಬುಧವಾರ ಇಂಡೋನೇಷ್ಯಾದ ಉತ್ತರ ಸುಮಾತ್ರಾ ಪ್ರಾಂತ್ಯದ ಮೇಲ್ಭಾಗದ ವಾತಾವರಣದಲ್ಲಿ ಉಪಗ್ರಹವು ಉರಿದು ಬಿದ್ದಿದೆ ಎಂದು ನಾಸಾ ಅಧಿಕೃತವಾಗಿ ದೃಢಪಡಿಸಿದೆ. ಸುಮಾರು ೧,೪೫೨ ಕಿಲೋಗ್ರಾಂ ತೂಕದ ಈ ಉಪಗ್ರಹವು ಶಬ್ದದ ವೇಗಕ್ಕಿಂತ ೨೨ ಪಟ್ಟು ಹೆಚ್ಚಿನ ವೇಗದಲ್ಲಿ ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸಿತು. ತೀವ್ರವಾದ ಘರ್ಷಣೆಯಿಂದ ಉಂಟಾದ ಅಗಾಧ ಶಾಖಕ್ಕೆ ಉಪಗ್ರಹದ ಬಹುತೇಕ ಭಾಗಗಳು ವಾತಾವರಣದಲ್ಲೇ ಕರಗಿ ಬೂದಿಯಾಗಿವೆ. ಕೆಲ ಸಣ್ಣ ಅವಶೇಷಗಳು ಭೂಮಿಗೆ ಬಿದ್ದಿರಬಹುದಾದರೂ, ಈವರೆಗೆ ಯಾವುದೇ ಸಾವು-ನೋವು ಅಥವಾ ಹಾನಿ ಸಂಭವಿಸಿಲ್ಲ ಎಂದು ಯುಎಸ್ ಸ್ಪೇಸ್ ಫೋರ್ಸ್ ತಿಳಿಸಿದೆ.
ಸ್ವತಂತ್ರ ನೋದನ (ಪ್ರೊಪಲ್ಷನ್) ವ್ಯವಸ್ಥೆ ಇಲ್ಲದಿದ್ದ ಈ ಉಪಗ್ರಹದ ಕಕ್ಷೆಯನ್ನು ಮೇಲಕ್ಕೆತ್ತಿ ಅದರ ಜೀವಿತಾವಧಿಯನ್ನು ಹೆಚ್ಚಿಸಲು ಜುಲೈನಲ್ಲಿ ನಾಸಾ ಮತ್ತು ಕ್ಯಾಟಲಿಸ್ಟ್ ಸಂಸ್ಥೆ ಜಂಟಿಯಾಗಿ 'ಲಿಂಕ್' (Link) ಎಂಬ ರಕ್ಷಣಾ ನೌಕೆಯನ್ನು ಕಳುಹಿಸಿದ್ದವು. ಆದರೆ ಆ ಕಾರ್ಯಾಚರಣೆ ವಿಫಲಗೊಂಡ ಹಿನ್ನೆಲೆಯಲ್ಲಿ, ನಿಯಂತ್ರಣ ಕಳೆದುಕೊಂಡ ಉಪಗ್ರಹವು ಗುರುತ್ವಾಕರ್ಷಣೆಗೆ ಸಿಲುಕಿ ಭೂಮಿಯತ್ತ ಜಾರಿ ಅಂತಿಮವಾಗಿ ಪತನಗೊಂಡಿದೆ.



