ಕಾಸರಗೋಡು: ನಗರ ಠಾಣೆ ಪೊಲೀಸರು ಬುಧವಾರ ರಾತ್ರಿ ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ 3.37 ಗ್ರಾಂ ಮಾರಕ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿದ್ದಾರೆ.
ನೆಲ್ಲಿಕುಂಜೆ ಕಸಬಾ ಬೀಚ್ ನಿವಾಸಿ ಅಭಿಜಿತ್ ಪಿ. (26) ಬಂಧಿತ ಆರೋಪಿ. ನಗರ ಠಾಣೆಯ ಇನ್ಸ್ಪೆಕ್ಟರ್ ಮೆಲ್ವಿನ್ ಜೋಸೆಫ್ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಉಪನಿರೀಕ್ಷಕ (ಎಸ್ಐ) ಮನು ಪಿ.ವಿ. ನೇತೃತ್ವದ ಪೊಲೀಸ್ ತಂಡ ಆರೋಪಿಯ ಮನೆ ಮೇಲೆ ದಾಳಿ ನಡೆಸಿತು. ಈ ವೇಳೆ ಆತನ ಮಲಗುವ ಕೋಣೆಯಲ್ಲಿ ಬಚ್ಚಿಟ್ಟಿದ್ದ ಎಂಡಿಎಂಎ ಪತ್ತೆಯಾಗಿದೆ.
ಮೊಗ್ರಾಲ್ ನಿವಾಸಿ ಕಬೀರ್ ಎಂಬಾತನಿಂದ ತಾನು ಈ ಮಾದಕ ವಸ್ತುವನ್ನು ಪಡೆದುಕೊಂಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ. ದಾಳಿಯ ವೇಳೆ ಮನೆಯಲ್ಲಿದ್ದ ₹6,020 ನಗದು, ಕರ್ನಾಟಕ ಬ್ಯಾಂಕ್ ಎಟಿಎಂ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಪೊಲೀಸರು ಜಪ್ತಿ ಮಾಡಿದ್ದು, ಜಾಲದ ಜಾಡು ಹಿಡಿದು ತನಿಖೆ ಮುಂದುವರಿಸಿದ್ದಾರೆ.


