ರೇವಾ: ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ದನ ಮಿಶ್ರಾ, ರೈತರ ಕುರಿತು ಹಗುರವಾಗಿ ಮಾತನಾಡುವ ಮೂಲಕ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಈಗಿನ ರೈತರು ಕೇವಲ ಮೂರು ತಿಂಗಳು ಕೆಲಸ ಮಾಡ್ತಾರೆ. ಉಳಿದ ಒಂಬತ್ತು ತಿಂಗಳು ಇಸ್ಪೀಟು ಆಡ್ತಾ, ಗುಟ್ಕಾ, ಮದ್ಯ ಸೇವಿಸುತ್ತಾ ಟೈಂಪಾಸ್ ಮಾಡ್ತಾರೆ ಎಂಬ ಹೇಳಿಕೆಯು ತೀವ್ರ ಟೀಕೆಗಳಿಗೆ ಗುರಿಯಾಗಿದೆ.
ಅವರು ಸೋಮವಾರ ತಮ್ಮ ರೇವಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೌಗಂಜ್ ಜಿಲ್ಲೆಯಲ್ಲಿ ಗೋವರ್ಧನ ಪೂಜೆಯ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದರ ವಿಡಿಯೋವನ್ನು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ, ಬಿಜೆಪಿ ಸಂಸದರು ರೈತರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದು, ಸಾರ್ವಜನಿಕರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಇಂದಿನ ರೈತರು ಹಿಂದಿನವರಂತೆ ಇಲ್ಲ, ಆರಾಮದಾಯಕ ಜೀವನಶೈಲಿಗೆ ಒಗ್ಗಿಕೊಂಡಿದ್ದಾರೆ" ಎಂದು ಮಿಶ್ರಾ ಹೇಳಿರುವುದು ವಿಡಿಯೋದಲ್ಲಿದೆ.
ತದನಂತರ ಅವರು, ರೈತರು ವರ್ಷದಲ್ಲಿ ಮೂರು ತಿಂಗಳು ಮಾತ್ರ ಕೆಲಸ ಮಾಡಿದರೆ ಉಳಿದ ಒಂಬತ್ತು ತಿಂಗಳು ಏನು ಮಾಡುತ್ತಾರೆ ಕೇಳ್ತಾರೆ. ಆಗ ವೇದಿಕೆಯ ಬಳಿ ಇದ್ದ ಯಾರೋ ಒಬ್ಬರು ಇಸ್ಪೀಟ್ ಆಡ್ತೀವಿ ಎಂದು ಉತ್ತರಿಸಿದಾಗ, ಇಂದಿನ ರೈತರು ಮೂರು ತಿಂಗಳು ಕೆಲಸ ಮಾಡ್ತಾರೆ. ಉಳಿದ ಒಂಬತ್ತು ತಿಂಗಳು ಇಸ್ಪೀಟ್ ಆಡ್ತಾ, ಗುಟ್ನಾ, ಮದ್ಯ ಸೇವಿಸಿಕೊಂಡು 'ಜೈ ಭೋಲೆ' ಎಂದು ಜಪಿಸುತ್ತಾ ಕಾಲ ಕಳೆಯುತ್ತಾರೆ ಎಂದು ಹೇಳಿದ್ದಾರೆ.


