HEALTH TIPS

ಅಜ್ಜನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕು ಇದೆಯೇ?: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಅಜ್ಜನ ಆಸ್ತಿಯಲ್ಲಿ ಮೊಮ್ಮಕ್ಕಳ ಹಕ್ಕುಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ, ಲ್ಯಾಂಡ್ ಮಾರ್ಕ್ ತೀರ್ಪು ಪ್ರಕಟಿಸಿದೆ.


1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಅಜ್ಜನ ಆಸ್ತಿ ಅವರ ಮಕ್ಕಳಿಗೆ (ಅವರ ಮೊದಲ ತಲೆಮಾರಿನ ವಾರಸುದಾರರಿಗೆ) ಹಂಚಿಕೆಯಾದ ಬಳಿಕ, ತಂದೆಗೆ ಸಿಕ್ಕ ಪಾಲು ಅವರ ವೈಯಕ್ತಿಕ ಆಸ್ತಿಯಾಗುತ್ತದೆ. ಅಂತಹ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಆಗಸ್ಟೀನ್ ಜಾರ್ಜ್ ಮಸಿಹ್ ಮತ್ತು ಸುನೀತಾ ಅಗರ್ವಾಲ್ ಅವರ ಪೀಠ ತೀರ್ಪು ನೀಡಿದೆ. ತನ್ನ ಅಜ್ಜನಿಂದ ತನ್ನ ತಂದೆಗೆ ಬಂದ ಜಮೀನಿನಲ್ಲಿ ಅರ್ಧ ಪಾಲು ಕೇಳಿ ಮಗ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ

ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ 1,811 ಚದರ ಅಡಿ ಜಮೀನಿನ ವಿಚಾರವಾಗಿ ವಿವಾದ ಉಂಟಾಗಿತ್ತು. ವ್ಯಕ್ತಿಯೊಬ್ಬರ ಮಗಳು (ಅರ್ಜಿದಾರರ ಚಿಕ್ಕಮ್ಮ) ತಮ್ಮ ತಂದೆಯ ಆಸ್ತಿಯನ್ನು ಹಂಚಿಕೆ ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. 1994ರಲ್ಲಿ ನಡೆದ ಒಪ್ಪಂದದ ಪ್ರಕಾರ ಜಮೀನಿನ ಒಂದು ಭಾಗ ಅರ್ಜಿದಾರನ ತಂದೆಗೆ ಹಂಚಿಕೆಯಾಗಿತ್ತು. ಅದೇ ವರ್ಷ ಮಗ ಜನಿಸಿದ್ದ. ಬಳಿಕ 1997ರಲ್ಲಿ ತಂದೆ ಆ ಜಮೀನನ್ನು ಇಬ್ಬರು ಖರೀದಿದಾರರಿಗೆ ಮಾರಾಟ ಮಾಡಿದ್ದರು.

1997ರಲ್ಲಿ ಅಪ್ರಾಪ್ತ ಮಗ (ತನ್ನ ತಾಯಿಯನ್ನು ನೈಸರ್ಗಿಕ ಪಾಲಕಳನ್ನಾಗಿ ಉಲ್ಲೇಖಿಸಿ) ಪ್ರಕರಣ ದಾಖಲಿಸಿದ್ದ. ಆತ ಜಮೀನಿನ ವಿಭಜನೆ ಹಾಗೂ ಅದರಲ್ಲಿ ಅರ್ಧ ಪಾಲಿನ ಸ್ವಾಧೀನವನ್ನು ಕೋರಿದ್ದ. ಈ ಜಮೀನು ತನ್ನ ಅಜ್ಜನ ಅವಿಭಕ್ತ ಕುಟುಂಬದ ಆಸ್ತಿಯಾಗಿದ್ದು, ಅದು ಮೇಲ್ಮನವಿದಾರನ ತಂದೆಗೆ (ಪ್ರತಿವಾದಿ ಸಂಖ್ಯೆ 1/D1) ಮತ್ತು ಅವರ ಮೂಲಕ ತನಗೆ (ಮೇಲ್ಮನವಿದಾರನಿಗೆ) ಪರಂಪರಾಗತವಾಗಿ ಬಂದಿದೆ ಎಂದು ಆತ ವಾದಿಸಿದ್ದ.

ಕೆಳಹಂತದ ನ್ಯಾಯಾಲಯಗಳು ಅರ್ಜಿದಾರನ (ಮೊಮ್ಮಗ) ಪರ ತೀರ್ಪು ನೀಡಿದ್ದವು. ಆದರೆ ಮೇಲ್ಮನವಿ ಸಲ್ಲಿಸಿದ್ದಾಗ ಉಚ್ಚ ನ್ಯಾಯಾಲಯ ಆ ಆದೇಶವನ್ನು ರದ್ದುಗೊಳಿಸಿತು. ತಂದೆಗೆ ಸೆಕ್ಷನ್ 8ರ ಅಡಿಯಲ್ಲಿ ಬಂದ ಆಸ್ತಿ ಅವರ ವೈಯಕ್ತಿಕ ಆಸ್ತಿಯಾಗಿದ್ದು, ಮಗನಿಗೆ ಅದರಲ್ಲಿ ಹುಟ್ಟಿನಿಂದ ಹಕ್ಕಿಲ್ಲ ಎಂದು ಅಭಿಪ್ರಾಯಪಟ್ಟಿತು. ಮದ್ರಾಸ್ ಹೈಕೋರ್ಟ್ ಕೂಡ ಇದೇ ನಿಲುವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮಗ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8ರ ಪ್ರಕಾರ, ಹಿಂದೂ ಪುರುಷನೊಬ್ಬ ವಿಲ್ ಬರೆಯದೆ ಮೃತಪಟ್ಟರೆ, ಆತನ ಆಸ್ತಿ ಮೊದಲನೇ ವರ್ಗದ ವಾರಸುದಾರರಿಗೆ ಹಂಚಿಕೆಯಾಗುತ್ತದೆ. ಈ ವರ್ಗದಲ್ಲಿ ಮಗ, ಮಗಳು, ಪತ್ನಿ, ತಾಯಿ ಸೇರಿದಂತೆ ಕಾನೂನಿನಲ್ಲಿ ಗುರುತಿಸಿರುವ ವಾರಸುದಾರರು ಬರುತ್ತಾರೆ.

ಅಜ್ಜನ ಆಸ್ತಿ ಈ ರೀತಿ ಹಂಚಿಕೆಯಾದಾಗ, ತಂದೆಗೆ ಸಿಕ್ಕ ಪಾಲು ಅವರ ವೈಯಕ್ತಿಕ ಆಸ್ತಿಯಾಗುತ್ತದೆ. ಅದು ಸ್ವಯಂಚಾಲಿತವಾಗಿ ತಂದೆ ಮತ್ತು ಅವರ ಮಕ್ಕಳ ಜಂಟಿ ಕುಟುಂಬದ ಆಸ್ತಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, ಅಜ್ಜನ ಆಸ್ತಿಯ ವಿಭಜನೆಯಾದ ಬಳಿಕ ಜಂಟಿ ಕುಟುಂಬದ ಸಹಪಾಲುದಾರಿಕೆ ಮುಂದುವರಿಯುವುದಿಲ್ಲ. ಹೀಗಾಗಿ ಮೊಮ್ಮಗನಿಗೆ ಕೇವಲ ಜನನದ ಆಧಾರದ ಮೇಲೆ ತಂದೆಯ ಪಾಲಿನಲ್ಲಿ ಹಕ್ಕು ಸಿಗುವುದಿಲ್ಲ ಎಂದು ಪೀಠ ಹೇಳಿದೆ.

ಅಜ್ಜನಿಂದ ತಂದೆಗೆ ಬಂದ ಪ್ರತಿಯೊಂದು ಆಸ್ತಿಯೂ ಮೊಮ್ಮಗನಿಗೆ ಜನ್ಮದಿಂದಲೇ ಸೇರಬೇಕು ಎಂಬ ನಿಯಮವಿಲ್ಲ. ಆಸ್ತಿ ಯಾವ ರೀತಿಯಲ್ಲಿ ಬಂದಿತು, ಯಾವ ಕಾನೂನಿನ ಅಡಿಯಲ್ಲಿ ಹಂಚಿಕೆಯಾಯಿತು ಮತ್ತು ಕುಟುಂಬದ ಆಸ್ತಿಯ ಸ್ವರೂಪ ಏನು ಎಂಬುದು ಮುಖ್ಯ ಎಂದು ಕೋರ್ಟ್ ಹೇಳಿದೆ. 





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries