HEALTH TIPS

ಅಸ್ಸಾಂನಿಂದ ಕರೆತಂದ ನಾಲ್ಕೇ ದಿನಕ್ಕೆ ಮತ್ತೆ ಹೆಣ್ಣು ಹುಲಿ ಪರಾರಿ; ಕೇಜ್ ಕೆಳಗೆ ಸುರಂಗ ತೋಡಿ ಗ್ರೇಟ್ ಎಸ್ಕೇಪ್!

ಕೋಲ್ಕತ್ತಾ: ಜೈಲ್ ಬ್ರೇಕ್ ಕೇಳಿದ್ದೀರಾ.. ಆದರೆ ಕೇಜ್ ಬ್ರೇಕ್ ಕೇಳಿದ್ದೀರಾ.. ಅದೂ ಕೂಡ ಹುಲಿಯೊಂದು ಸಿಬ್ಬಂದಿಗಳಿಗೆ ಚಳ್ಳೇ ಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಕೋಲ್ಕತಾದಲ್ಲಿ ವರದಿಯಾಗಿದೆ. 


ಅಸ್ಸಾಂನಿಂದ ಸೆರೆಹಿಡಿದು ಪಶ್ಚಿಮ ಬಂಗಾಳದ ಬಕ್ಸಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕರೆತಂದಿದ್ದ ಹುಲಿಯೊಂದು ಕೇವಲ ನಾಲ್ಕೇ ದಿನಗಳಲ್ಲಿ ಮತ್ತೆ ಪರಾರಿಯಾಗಿದೆ. ತನ್ನನ್ನು ಇರಿಸಿದ್ದ ಆವರಣದ ಅಡಿಯಲ್ಲಿ ಗುಂಡಿ ತೋಡಿ ಹೊರಬಂದಿರುವ ಮೂರು ವರ್ಷದ ಹೆಣ್ಣು ಹುಲಿ, ಮತ್ತೆ ಅಸ್ಸಾಂನತ್ತ ಪ್ರಯಾಣ ಬೆಳೆಸಿದೆ.

ಪಶ್ಚಿಮ ಬಂಗಾಳದ ಬಕ್ಸಾ ಅರಣ್ಯದಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಹುಲಿಗಳ ಮರುಪರಿಚಯ ಯೋಜನೆ ಆರಂಭಿಸಲಾಗಿದೆ. ಇದರ ಭಾಗವಾಗಿ ಬಿಹಾರದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಿಂದ ಈ ಹೆಣ್ಣು ಹುಲಿಯನ್ನು ಕರೆತಂದು ಅಕ್ಟೋಬರ್ 2ರಂದು ಬಕ್ಸಾದ 25ನೇ ಮೈಲ್ ಪ್ರದೇಶದ ಅರಣ್ಯಕ್ಕೆ ಬಿಡಲಾಗಿತ್ತು.

ಆದರೆ, ಅಕ್ಟೋಬರ್ 4ರಂದೇ ಅದು ಆವರಣದಿಂದ ಹೊರಬಂದು ಅಸ್ಸಾಂನ ರೈಮೋನಾ ಅರಣ್ಯ ಪ್ರದೇಶಕ್ಕೆ ತೆರಳಿತ್ತು. ಸುಮಾರು ಒಂದು ತಿಂಗಳ ಕಾಲ ಅರಣ್ಯ ಇಲಾಖೆ ಸಿಬ್ಬಂದಿ ಅದರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು.

ಸಿಗ್ನಲ್ ಸಿಗದೇ ಅಧಿಕಾರಿಗಳು ಗಲಿಬಿಲಿ

ಹುಲಿಯ ಕೊರಳಿಗೆ ಅಳವಡಿಸಿದ್ದ ರೇಡಿಯೋ ಕಾಲರ್‌ನಿಂದ 32 ಗಂಟೆಗಳಿಗೂ ಹೆಚ್ಚು ಕಾಲ ಯಾವುದೇ ಸಿಗ್ನಲ್ ಸಿಗದ ಕಾರಣ ಅಧಿಕಾರಿಗಳು ಆತಂಕಗೊಂಡಿದ್ದರು. ಬಳಿಕ ಸಿಗ್ನಲ್ ಪತ್ತೆಯಾದಾಗ ಅದು ಅಸ್ಸಾಂನ ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದು ಗೊತ್ತಾಗಿತ್ತು. ಕೆಲವು ಕಡೆ ಜನವಸತಿ ಪ್ರದೇಶಗಳ ಸಮೀಪವೂ ಕಾಣಿಸಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ನವೆಂಬರ್ 3ರಂದು ಅಸ್ಸಾಂನ ರೈಮೋನಾ ರಾಷ್ಟ್ರೀಯ ಉದ್ಯಾನವನದ ಸಮೀಪದ ದೋತ್ಮಾ ಪ್ರದೇಶದ ಗಿಲಾಗುರಿಯಲ್ಲಿ ಹುಲಿಗೆ ಅರವಳಿಕೆ ಮದ್ದು ನೀಡಿ ಸೆರೆಹಿಡಿದಿದ್ದರು. ಬಳಿಕ ಅದನ್ನು ಮತ್ತೆ ಬಕ್ಸಾಗೆ ಕರೆತಂದು 2.2 ಹೆಕ್ಟೇರ್ ವಿಸ್ತೀರ್ಣದ ವಿಶೇಷ ಆವರಣದಲ್ಲಿ ಇರಿಸಲಾಗಿತ್ತು.

ಆದರೆ, ಭಾನುವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಹುಲಿ ಮತ್ತೆ ಪರಾರಿಯಾಗಿದೆ. ಆವರಣದ ಅಡಿಪಾಯದ ಕೆಳಗೆ ಗುಂಡಿ ತೋಡಿ ಹೊರಬಂದಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಅಸ್ಸಾಂನತ್ತ ಸಾಗುತ್ತಿರುವ ಹುಲಿ ಬಲಾ ನದಿಯನ್ನೂ ದಾಟಿದೆ ಎನ್ನಲಾಗಿದೆ. ಈಗ ಅದು ಮತ್ತೆ ತನ್ನ ಹಿಂದಿನ ಮಾರ್ಗದಲ್ಲಿ ಸಾಗಿದರೆ ಜಯಂತಿ ಮತ್ತು ರೈಡಕ್ ನದಿಗಳನ್ನು ದಾಟಿ ಸಂಕೋಶ್ ನದಿಯನ್ನು ತಲುಪಬೇಕಾಗುತ್ತದೆ. ಅಲ್ಲಿಂದ ಅಸ್ಸಾಂ ಅಥವಾ ಭೂತಾನ್‌ನತ್ತ ತೆರಳುವ ಸಾಧ್ಯತೆಯಿದೆ.

ಒಂದೇ ತಿಂಗಳಲ್ಲಿ ಮೂರು ಬಾರಿ ಅರವಳಿಕೆ ಮದ್ದು!

ಆಘಾತಕಾರಿ ಅಂಶವೆಂದರೆ ಈ ಹೆಣ್ಣು ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಈಗಾಗಲೇ ಮೂರು ಬಾರಿ ಅರವಳಿಕೆ ಮದ್ದು ನೀಡಿದೆ. ಸೆಪ್ಟೆಂಬರ್ 29ರಂದು ಬಿಹಾರದ ವಾಲ್ಮೀಕಿ ಅರಣ್ಯದಲ್ಲಿ ಮೊದಲ ಬಾರಿ ಸೆರೆಹಿಡಿಯಲಾಗಿತ್ತು. ಬಕ್ಸಾಗೆ ಸಾಗಿಸುವಾಗ ರೇಡಿಯೋ ಕಾಲರ್ ಕಳಚಿದ್ದರಿಂದ ಅಕ್ಟೋಬರ್ 1ರಂದು ಮತ್ತೊಮ್ಮೆ ಅರವಳಿಕೆ ಮದ್ದು ನೀಡಿ ಕಾಲರ್ ಅಳವಡಿಸಲಾಗಿತ್ತು.

ನಂತರ ಅಸ್ಸಾಂನ ರೈಮೋನಾ ಅರಣ್ಯ ಪ್ರದೇಶದಲ್ಲಿ ನವೆಂಬರ್ 3ರಂದು ಮೂರನೇ ಬಾರಿ ಸೆರೆಹಿಡಿಯಲಾಗಿತ್ತು. ಈಗ ನಾಲ್ಕೇ ದಿನಗಳಲ್ಲಿ ಮತ್ತೆ ಪರಾರಿಯಾಗಿರುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟಿ-138 ಎಂದು ಗುರುತಿಸಲಾಗಿದ್ದ ಈ ಹುಲಿಗೆ ನಂತರ ಬಿಟಿಆರ್-ಟಿಎಫ್1 ಎಂದು ಹೆಸರಿಡಲಾಗಿತ್ತು.

ಹುಲಿ ಆವರಣದ ಕೆಳಗೆ ಗುಂಡಿ ತೋಡಿ ಹೊರಬರಲು ಸಾಧ್ಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಾರತೀಯ ವನ್ಯಜೀವಿ ಸಂಸ್ಥೆಯ ಮಾಜಿ ವಿಜ್ಞಾನಿಯೊಬ್ಬರು, ಆವರಣದ ಅಡಿಪಾಯ ಸರಿಯಾಗಿ ನಿರ್ಮಿಸದಿದ್ದರೆ ದೊಡ್ಡ ಪ್ರಾಣಿಗಳು ಕೆಳಗಿನಿಂದ ದಾರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಈ ಘಟನೆಯಿಂದ ಹುಲಿಗಳ ಮರುಪರಿಚಯ ಯೋಜನೆಯಡಿ ನಿರ್ಮಿಸಿರುವ ಆವರಣದ ಭದ್ರತೆ ಮತ್ತು ಕಾಡುಪ್ರಾಣಿಗಳನ್ನು ನಿರ್ದಿಷ್ಟ ಪ್ರದೇಶದಲ್ಲಿ ಉಳಿಸಿಕೊಳ್ಳುವ ಸವಾಲುಗಳ ಬಗ್ಗೆ ಹೊಸ ಪ್ರಶ್ನೆಗಳು ಎದ್ದಿವೆ. 






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries