ಕುಂಬಳೆ: ಕುಂಬಳೆ-ಸೀತಾಂಗೋಳಿ-ಪುತ್ತಿಗೆ ರಸ್ತೆಯ ಪುತ್ತಿಗೆ ಸೇತುವೆ ಸಮೀಪದ ತಿರುವಿನಲ್ಲಿ ಆಟೋರಿಕ್ಷಾ ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಿಕ್ಷಾ ಪ್ರಯಾಣಿಕ, ಪುತ್ತಿಗೆ ಸಮೀಪದ ಕಮ್ಮುಂತಿಲ ನಿವಾಸಿ 'ಬೊಂಬೆ ಮಹಮ್ಮಚ್ಚ' ಎಂದೇ ಪರಿಚಿತರಾಗಿದ್ದ ಮೆಹಮೂದ್ (78) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಇವರು ಈ ಹಿಂದೆ ಮುಂಬೈನಲ್ಲಿ ವ್ಯಾಪಾರಿಯಾಗಿದ್ದರು.
ನವೆಂಬರ್ 11ರಂದು ಪುತ್ತಿಗೆಯಲ್ಲಿ ಪೆರ್ಲ-ಕುಂಬಳೆ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ ಮತ್ತು ಆಟೋರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರಯಾಣಿಕ ಮೆಹಮೂದ್ ಹಾಗೂ ಆಟೋ ಚಾಲಕ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಮೆಹಮೂದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ಆಟೋ ಚಾಲಕ ಕಾಸರಗೋಡಿನ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಾಗರಿಕರ ಪ್ರತಿಭಟನೆ, ಬಸ್ ಸಂಚಾರ ಸ್ಥಗಿತ: ಮೆಹಮೂದ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪುತ್ತಿಗೆ ಪ್ರದೇಶದಲ್ಲಿ ದುಃಖತಪ್ತ ನಾಗರಿಕರು ಜಮಾಯಿಸಿ, ಅಪಘಾತಕ್ಕೆ ಬಸ್ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಸ್ ಸಂಚಾರಕ್ಕೆ ತಡೆಯೊಡ್ಡಿದರು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣವೇ ಕುಂಬಳೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ನಂತರ ಬಸ್ ಮಾಲೀಕರು ಪುತ್ತಿಗೆ-ಸೀತಾಂಗೋಳಿ ಮಾರ್ಗವಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ ಮೃತರಿಗೆ ಸಂತಾಪ ಸೂಚಿಸಿದರು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕುಂಬಳೆ-ಸೀತಾಂಗೋಳಿ-ಪುತ್ತಿಗೆ ಮಾರ್ಗವಾಗಿ ಪೆರ್ಲ ಹಾಗೂ ಧರ್ಮತ್ತಡ್ಕ ಭಾಗಗಳಿಗೆ ಸಂಚರಿಸುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.



