HEALTH TIPS

ಕಾಲಡಿ ಸಂಸ್ಕೃತ ವಿವಿ ಅಮಾನತುಗೊಂಡ ವಿದ್ಯಾರ್ಥಿಗಳ ಪರೀಕ್ಷೆ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ ವಿಶ್ವವಿದ್ಯಾಲಯ

ಕೊಚ್ಚಿ: ಪರೀಕ್ಷೆ ಬರೆಯಲು ಅನುಮತಿ ನೀಡಬೇಕೆಂದು ಕೋರಿ ಕಾಲಡಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಅಮಾನತುಗೊಂಡಿರುವ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ, ವಿಶ್ವವಿದ್ಯಾಲಯವು ಸುಪ್ರೀಂ ಕೋರ್ಟ್‌ನಲ್ಲಿ ತಡೆ ಅರ್ಜಿ (ಕೇವಿಯಟ್) ದಾಖಲಿಸಿದೆ. ಯಾವುದೇ ಮಧ್ಯಂತರ ಆದೇಶ ಹೊರಡಿಸುವ ಮುನ್ನ ವಿಶ್ವವಿದ್ಯಾಲಯದ ವಾದವನ್ನು ಆಲಿಸಬೇಕು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. 


ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದ ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ನಿಯಮಬಾಹಿರ ಎಂದು ಹೈಕೋರ್ಟ್ ವಿಭಾಗೀಯ ಪೀಠ ರದ್ದುಪಡಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಗೆ ಹಾಜರಾಗಲು ಅಗತ್ಯ ಕನಿಷ್ಠ ಹಾಜರಾತಿ ಇಲ್ಲದಿರುವುದು ಪ್ರಮುಖ ತೊಡಕಾಗಿದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಹಾಗೂ ಎಸ್. ಮುರಳೀಕೃಷ್ಣ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿತ್ತು.

ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದ ಏಕಸದಸ್ಯ ಪೀಠದ ತೀರ್ಪಿನ ವಿರುದ್ಧ ಹಂಗಾಮಿ ಉಪಕುಲಪತಿ (ವಿಸಿ) ಸಿಸಾ ಥಾಮಸ್ ಹಾಗೂ ವಿಶ್ವವಿದ್ಯಾಲಯ ಆಡಳಿತ ಮಂಡಳಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು. ಕನಿಷ್ಠ ಹಾಜರಾತಿ ಇದೆಯೇ ಎಂಬುದನ್ನೂ ಪರಿಶೀಲಿಸದೆ ಏಕಸದಸ್ಯ ಪೀಠ ಆದೇಶ ನೀಡಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಅಗತ್ಯ ಹಾಜರಾತಿಯಿಲ್ಲ ಹಾಗೂ ಸೂಪರ್ ಫೈನ್‌ನೊಂದಿಗೆ ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ಗಡುವೂ ಮುಕ್ತಾಯಗೊಂಡಿದೆ ಎಂಬುದು ವಿಸಿ ಅವರ ಪ್ರಮುಖ ವಾದವಾಗಿತ್ತು.

ವಿಭಾಗೀಯ ಪೀಠ ಅನುಮತಿ ನಿರಾಕರಿಸಿದ ಕಾರಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಕೈತಪ್ಪುವಂತಾಗಿದೆ. ಆಗಸ್ಟ್ 13ರಂದು ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ವೇಳೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ 16 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿತ್ತು. ಎರಡು ತಿಂಗಳು ಕಳೆದರೂ ಅಮಾನತು ಆದೇಶವನ್ನು ಹಿಂಪಡೆದಿಲ್ಲ. ಅಮಾನತುಗೊಂಡಿರುವ 16 ವಿದ್ಯಾರ್ಥಿಗಳಲ್ಲಿ 10 ಮಂದಿ ಹಾಲಿ ಪರೀಕ್ಷೆ ಬರೆಯಬೇಕಾದವರಾಗಿದ್ದು, ಅವರ ಶೈಕ್ಷಣಿಕ ಭವಿಷ್ಯ ಅನಿಶ್ಚಿತತೆಯಲ್ಲಿ ಮುಂದುವರಿದಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries