ಕಾಸರಗೋಡು: ಕಾಸರಗೋಡು ಬ್ಲಾಕ್ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ (ಡಿಟಿಪಿಸಿ) ಜಂಟಿಯಾಗಿ ಕುಂಬಳೆ ಗ್ರಾಮ ಪಂಚಾಯತ್ ಮತ್ತು ಇಂಡಿಯಾ ಟೂರಿಸಂ ಸಹಕಾರದೊಂದಿಗೆ ಆಯೋಜಿಸಿದ್ದ ಗಮನಾರ್ಹ ರಾಷ್ಟ್ರೀಯ ಗಾಳ ಹಾಕುವ (ಚೂಂಡಯಿಡಲ್) ಸ್ಪರ್ಧೆಯು ಯಶಸ್ವಿಯಾಗಿ ಸಮಾಪನಗೊಂಡಿದೆ. ಕಾಸರಗೋಡಿನ ಆರಿಕ್ಕಾಡಿ ಶಿರಿಯಾ ನದಿ ತೀರದಲ್ಲಿ ನಡೆದ ಈ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 71 ಸ್ಪರ್ಧಿಗಳು ಭಾಗವಹಿಸಿದ್ದರು.
ಬೆಳಿಗ್ಗೆ ನಡೆದ ಸ್ಪರ್ಧೆಯನ್ನು ಕಾಸರಗೋಡು ಲೋಕಸಭಾ ಸದಸ್ಯ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ತಂಡಗಳು ಪಾಲ್ಗೊಂಡಿದ್ದ ಮೂರು ಗಂಟೆಗಳ ಕಾಲ ನಡೆದ ರೋಚಕ ಸ್ಪರ್ಧೆಯಲ್ಲಿ ಮೊಗ್ರಾಲ್‌ನ ಕೌಸರ್ ಅಹ್ಮದ್ ಪ್ರಥಮ ಸ್ಥಾನ ಪಡೆದುಕೊಂಡರು. ಆರಿಕ್ಕಾಡಿಯ ಮುಹಮ್ಮದ್ ನಿಸಾರ್ ದ್ವಿತೀಯ ಸ್ಥಾನ ಹಾಗೂ ನೆಲ್ಲಿಕುನ್ನುವಿನ ಅಫ್ಸಲ್ ತೃತೀಯ ಸ್ಥಾನವನ್ನು ಗಳಿಸಿದರು.
ಸ್ಪರ್ಧೆಯ ಬಳಿಕ ಆರಿಕ್ಕಾಡಿಯ ಕೆಪಿಎಸ್ ರೆಸಾರ್ಟ್‌ನಲ್ಲಿ ಎಲ್ಲಾ ಸ್ಪರ್ಧಿಗಳು ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಸಮಾರಂಭವನ್ನು ಉದ್ಘಾಟಿಸಿದರು. ಕಾಸರಗೋಡಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿರುವುದಕ್ಕೆ ಅವರು ಸಂಘಟಕ ಸಮಿತಿಯನ್ನು ಅಭಿನಂದಿಸಿದರು. ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಾ ಕುಂಞಿ ಚೆರ್ಕಳ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣಪತ್ರ ಹಾಗೂ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಡಿಟಿಪಿಸಿ ಕಾರ್ಯದರ್ಶಿ ಜಿಜೇಶ್, ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲ, ಕಾಞಂಗಾಡ್ ಸಬ್ ಇನ್‌ಸ್ಪೆಕ್ಟರ್ ಸೈಫುದ್ದೀನ್, ಕುಂಬಳೆ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಅನೂಪ್, ಕೆಪಿಎಸ್ ರೆಸಾರ್ಟ್ ಮಾಲೀಕರಾದ ಮುನೀರುದ್ದೀನ್, ಹಕೀಂ ಹಾಗೂ ಸ್ಪರ್ಧೆಗೆ ಪ್ರಾಯೋಜಕತ್ವ ನೀಡಿದ ಮಂಗಳೂರಿನ ನಿಶಾನ್ ಕಾನಾನಿ ಮಾತನಾಡಿದರು.
ಬ್ಲಾಕ್ ಪಂಚಾಯತ್ ಸದಸ್ಯರಾದ ಸಕೀನಾ ಅಬ್ದುಲ್ಲಾ, ಸಿ.ವಿ. ಜೇಮ್ಸ್, ಸೋಯಾ ಲತೀಫ್, ನಸೀಮಾ ಕೊಡಿಯಮ್ಮ, ಅಡ್ವೊಕೇಟ್ ನಾಸಿಫಾ, ಸಫೀನಾ ಚೆಮ್ಮನಾಡ್, ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಮಾಜಿ ಅಧ್ಯಕ್ಷೆ ತಾಹಿರಾ ಯೂಸುಫ್, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಅಬ್ದು ರಹಮಾನ್ ಹಾಗೂ ಸದಸ್ಯರಾದ ಸಹೀದ್ ಮತ್ತು ಸಿದ್ದೀಕ್ ಉಪಸ್ಥಿತರಿದ್ದರು.



