ಮಲಪ್ಪುರಂ: ದುಬೈನಿಂದ ಅಕ್ರಮವಾಗಿ ಸಾಗಿಸಿ ತರಲಾಗಿದ್ದ ಚಿನ್ನವನ್ನು ಕಸಿದುಕೊಳ್ಳುವ ಉದ್ದೇಶದಿಂದ ಕರಿಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಿಳೆಯೊಬ್ಬರನ್ನು ಅಪಹರಿಸಿದ್ದ ಗ್ಯಾಂಗ್ ಅನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ದುಬೈನಿಂದ ವಿಮಾನದ ಮೂಲಕ ಆಗಮಿಸಿದ ರಿಯಾ ಎಂಬ ಮಹಿಳೆ, ಕಸ್ಟಮ್ಸ್ ಕಣ್ಣುತಪ್ಪಿಸಿ ಮಾಲೆ, ಬಳೆ ಮತ್ತು ಬ್ರೇಸ್‌ಲೆಟ್ ರೂಪದಲ್ಲಿ ಮೈಮೇಲೆ ಚಿನ್ನದ ಆಭರಣಗಳನ್ನು ಧರಿಸಿ ವಿಮಾನ ನಿಲ್ದಾಣದಿಂದ ಹೊರಬಂದಿದ್ದರು. ಆಕೆ ಹೊರಬರುತ್ತಿದ್ದಂತೆಯೇ ಕಾರಿನಲ್ಲಿ ಕಾಯುತ್ತಿದ್ದ ದುಷ್ಕರ್ಮಿಗಳ ತಂಡ ಆಕೆಯನ್ನು ಬಲವಂತವಾಗಿ ಅಪಹರಿಸಿಕೊಂಡು ಪರಾರಿಯಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು, ಮಲಪ್ಪುರಂನ ಪುಳಿಕಲ್ ಬಳಿ ಅಪಹರಣಕಾರರ ವಾಹನವನ್ನು ಸುತ್ತುವರಿದು ಮಹಿಳೆಯನ್ನು ರಕ್ಷಿಸಿದ್ದಾರೆ. ಜತೆಗೆ ಅಪಹರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ಕಣ್ಣೂರು ಮೂಲದ ಚಿನ್ನ ಕಳ್ಳಸಾಗಣೆ ಸುಲಿಗೆ ಗ್ಯಾಂಗ್‌ಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿದಿದೆ.



