ತಿರುವನಂತಪುರಂ: ಕೇರಳದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ದಾಖಲಿಸಲು ಮುಖ ಚಹರೆ ಪತ್ತೆ (ಫೇಸ್ ಡಿಟೆಕ್ಷನ್) ಕ್ಯಾಮೆರಾ ಅಳವಡಿಸುವ ₹6 ಕೋಟಿ ಮೌಲ್ಯದ ಯೋಜನೆಯನ್ನು ತನ್ನ ಸಹೋದರನ ಕಂಪನಿಗೆ ಯಾವುದೇ ಟೆಂಡರ್ ಇಲ್ಲದೆ ವಹಿಸಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ನಡೆಸಿದ ಅಕ್ರಮ ಯತ್ನ ಸರ್ಕಾರದ ಗಮನಕ್ಕೆ ಬಂದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಯೋಜನೆಗೆ ತಕ್ಷಣವೇ ತಡೆ ನೀಡಿದೆ.
ಶಾಲೆಗಳಲ್ಲಿ ಮುಖ ಚಹರೆ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರುವ ಕುರಿತು ಸರ್ಕಾರ ಯಾವುದೇ ನೀತಿ ನಿರೂಪಣಾ ತೀರ್ಮಾನ ಕೈಗೊಂಡಿರಲಿಲ್ಲ ಹಾಗೂ ಅಂತಹ ಯಾವುದೇ ಪ್ರಸ್ತಾವನೆ ಶಿಕ್ಷಣ ಇಲಾಖೆಯ ಮುಂದಿರಲಿಲ್ಲ. ಆದಾಗ್ಯೂ, ಈ ಐಎಎಸ್ ಅಧಿಕಾರಿ ಸ್ವಯಂಪ್ರೇರಿತರಾಗಿ ಈ ಯೋಜನೆಯ ಪ್ರಸ್ತಾವನೆಯನ್ನು ಸಿದ್ಧಪಡಿಸಿ ರಾಜ್ಯ ಯೋಜನಾ ಮಂಡಳಿಯ (ಪ್ಲಾನಿಂಗ್ ಬೋರ್ಡ್) ಮುಂದಿಟ್ಟಿದ್ದರು.
ಯಾವುದೇ ಮುಕ್ತ ಟೆಂಡರ್ ಕರೆಯದೆ, ಈ ಕ್ಯಾಮೆರಾ ಹಾಗೂ ತಂತ್ರಜ್ಞಾನ ವ್ಯವಸ್ಥೆಯನ್ನು ತನ್ನ ಸಹೋದರನ ಖಾಸಗಿ ಎಐ (ಕೃತಕ ಬುದ್ಧಿಮತ್ತೆ) ಕಂಪನಿಯಿಂದಲೇ ನೇರವಾಗಿ ಖರೀದಿಸಬೇಕೆಂದು ಅಧಿಕಾರಿ ಇಲಾಖೆಯ ಸಿಬ್ಬಂದಿಗೆ ಮೌಖಿಕ ಆದೇಶ ನೀಡಿದ್ದರು. ಆದರೆ, ನಿಯಮಾನುಸಾರ ಮುಕ್ತ ಟೆಂಡರ್ ಇಲ್ಲದೆ ಅಥವಾ ಕೇಂದ್ರ/ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹೊರತುಪಡಿಸಿ ಖಾಸಗಿ ಕಂಪನಿಯಿಂದ ನೇರ ಖರೀದಿ ಸಾಧ್ಯವಿಲ್ಲ ಎಂದು ಇಲಾಖಾ ಸಿಬ್ಬಂದಿ ಪಟ್ಟು ಹಿಡಿದು, ವಿಷಯವನ್ನು ಸರ್ಕಾರದ ಉನ್ನತ ಮಟ್ಟಕ್ಕೆ ತಲುಪಿಸಿದರು.
ಪ್ರಾಥಮಿಕ ಹಂತದಲ್ಲಿ ಆಯ್ದ ಶಾಲೆಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ₹6 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ರಾಜ್ಯದ ಎಲ್ಲಾ ಶಾಲೆಗಳಿಗೆ ಇದನ್ನು ವಿಸ್ತರಿಸಿದರೆ ಯೋಜನೆ ಮೊತ್ತ ₹100 ಕೋಟಿಗೂ ಅಧಿಕವಾಗುತ್ತಿತ್ತು. ಇದು ಅಧಿಕಾರಿಯ ಕುಟುಂಬಸ್ಥರ ಎಐ ಕ್ಯಾಮೆರಾ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವ ಹುನ್ನಾರ ಎಂಬುದು ಬಯಲಾಗುತ್ತಿದ್ದಂತೆ, ಈ ಪ್ರಸ್ತಾವನೆಯನ್ನು ಪರಿಗಣಿಸದಂತೆ ಯೋಜನಾ ಮಂಡಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವಿದ್ಯಾರ್ಥಿಗಳ ಹಾಜರಾತಿ, ಸಮಯ ಮತ್ತು ದಿನಾಂಕವನ್ನು ನೈಜ ಸಮಯದಲ್ಲಿ (ರಿಯಲ್ ಟೈಮ್) ದಾಖಲಿಸಲು ಹಾಗೂ ಪೇಪರ್ ಹಾಜರಾತಿ ಪುಸ್ತಕಗಳನ್ನು ತಪ್ಪಿಸಲು ಈ ತಂತ್ರಜ್ಞಾನ ಅಗತ್ಯ ಎಂದು ಅಧಿಕಾರಿ ವಾದಿಸಿದ್ದರು. ಆದರೆ, ಶಾಲಾ ಮಕ್ಕಳ ಬಯೋಮೆಟ್ರಿಕ್ ಮತ್ತು ಮುಖದ ಮಾಹಿತಿಯನ್ನು ಖಾಸಗಿ ಕಂಪನಿಯೊಂದರ ಕೈಗಿಡುವುದು ಗಂಭೀರ ಗೌಪ್ಯತಾ ಉಲ್ಲಂಘನೆ ಮತ್ತು ಡೇಟಾ ಸುರಕ್ಷತಾ ಲೋಪಕ್ಕೆ ಕಾರಣವಾಗುತ್ತದೆ ಎಂದು ಐಟಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳ ವೈಯಕ್ತಿಕ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಅಪಾಯವೂ ಇತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸರ್ಕಾರ ಈ ವಿವಾದಿತ ಯೋಜನೆಗೆ ಆರಂಭದಲ್ಲೇ ತೆರೆ ಎಳೆದಿದೆ. ಕೋವಿಡ್ ಅವಧಿಯಲ್ಲಿ ಸಾಕಷ್ಟು ವಿವಾದಕ್ಕೀಡಾಗಿದ್ದ ಅಧಿಕಾರಿಯೇ ಈ ಬಾರಿಯೂ ಇಂತಹದ್ದೊಂದು ಅಕ್ರಮ ಲಾಭಕ್ಕೆ ಕೈಹಾಕಿದ್ದಾರೆ ಎಂದು ವರದಿಯಾಗಿದೆ.



