ತಿರುವನಂತಪುರಂ: ಅರಣ್ಯ ಸಂರಕ್ಷಣೆ ಮತ್ತು ಜೀವವೈವಿಧ್ಯದ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಉದ್ದೇಶದಿಂದ ಖ್ಯಾತ ಮಲಯಾಳಂ ಚಿತ್ರನಟರಾದ ಪೃಥ್ವಿರಾಜ್ ಸುಕುಮಾರನ್ ಹಾಗೂ ಕುಂಚಾಕೋ ಬೋಬನ್ ಅವರನ್ನು ಕೇರಳ ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಗಳನ್ನಾಗಿ (ಅಂಬಾಸಿಡರ್) ನೇಮಕ ಮಾಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ನಿರ್ವಹಣೆ, ಪರಿಸರ ಸಮತೋಲನ ಹಾಗೂ ಜೀವವೈವಿಧ್ಯದ ಉಳಿವು ಕುರಿತು ಜನಸಾಮಾನ್ಯರಲ್ಲಿ ತಿಳಿವಳಿಕೆ ಬೆಳೆಸುವುದೇ ಈ ನೇಮಕಾತಿಯ ಮುಖ್ಯ ಉದ್ದೇಶವಾಗಿದೆ.
ಅರಣ್ಯ ಇಲಾಖೆಯ ವಿವಿಧ ಯೋಜನೆಗಳು ಮತ್ತು ಸಾರ್ವಜನಿಕ ಸೇವೆಗಳು ಹೆಚ್ಚಿನ ಸಂಖ್ಯೆಯ ಜನರಿಗೆ ತಲುಪುವಂತೆ ಮಾಡಲು ಇಲಾಖೆ ರೂಪಿಸುವ ಜಾಗೃತಿ ಕಾರ್ಯಕ್ರಮಗಳು, ಧ್ವನಿಮುದ್ರಿತ ಸಂದೇಶಗಳು ಮತ್ತು ಡಿಜಿಟಲ್ ಪ್ರಚಾರ ಅಭಿಯಾನಗಳಲ್ಲಿ ಇಬ್ಬರೂ ನಟರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ.
ಅರಣ್ಯ ಇಲಾಖೆಯ ಮುಖ್ಯಸ್ಥರ ಶಿಫಾರಸಿನ ಮೇರೆಗೆ, ಗೌರವಪೂರ್ವಕ ಸೇವಾ ಆಧಾರದ (ಆನರರಿ) ಮೇಲೆ ಈ ಇಬ್ಬರೂ ತಾರೆಯರನ್ನು ರಾಯಭಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



