ಕಾಸರಗೋಡು: ಧರ್ಮದ ಹೆಸರಿನಲ್ಲಿ ಮತ ಯಾಚಿಸುವ, ಪ್ರಾರ್ಥನಾ ಮಂದಿರಗಳನ್ನು ಕೇಂದ್ರವಾಗಿಸಿಕೊಂಡು ರಾಜಕೀಯ ನಡೆಸುವುದರ ಜತೆಗೆ ಭೂ ಒತ್ತುವರಿ ಹಾಗೂ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿರುವ ಮುಸ್ಲಿಂ ಲೀಗ್, ಬಿಜೆಪಿಗೆ ಉಪದೇಶ ನೀಡುವ ಅಗತ್ಯವಿಲ್ಲ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿರುಗೇಟು ನೀಡಿದ್ದಾರೆ.
ಜೋಡುಕಲ್ಲಿನ ಶ್ರೀ ಗಣೇಶ ಚತುರ್ಥಿ ಆಚರಣಾ ಸ್ಥಳದಲ್ಲಿದ್ದ ಚಪ್ಪರವನ್ನು ತೆರವುಗೊಳಿಸಲು ಆಗ್ರಹಿಸಿದ ಯೂತ್ ಲೀಗ್, ಸಮಾಜದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಲು ಯತ್ನಿಸುತ್ತಿದೆ. ಕಂದಾಯ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ತೀರ್ಪುಗಳನ್ನು ಎಲ್ಲಾ ಧರ್ಮಗಳ ಸಂಸ್ಥೆಗಳು ಹಾಗೂ ಪ್ರಾರ್ಥನಾ ಮಂದಿರಗಳಿಗೂ ಸಮಾನವಾಗಿ ಅನ್ವಯಿಸಲು ಮುಸ್ಲಿಂ ಲೀಗ್ ಆಡಳಿತವಿರುವ ಸ್ಥಳೀಯಾಡಳಿತ ಸಂಸ್ಥೆಗಳು, ರಾಜ್ಯ ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆ (PWD) ಸಿದ್ಧವಿದೆಯೇ ಎಂದು ಅವರು ಸವಾಲು ಹಾಕಿದ್ದಾರೆ. ಹಿಂದೂ ಸಮುದಾಯದ ಸ್ಮಶಾನ ಭೂಮಿಯನ್ನೇ ಒತ್ತುವರಿ ಮಾಡಿಕೊಂಡಿರುವ ಘಟನೆಗಳಿದ್ದು, ಇಂತಹ ಅಕ್ರಮಗಳಿಗೆ ಮುಸ್ಲಿಂ ಲೀಗ್ ನೇತೃತ್ವವೇ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿದರು.
ಜೋಡುಕಲ್ಲು ಪ್ರಕರಣ, ಪ್ರಧಾನಮಂತ್ರಿ ವಸತಿ ಯೋಜನೆಯಲ್ಲಿನ ಹಗರಣ ಹಾಗೂ ಭೂ ಒತ್ತುವರಿ ಮುಂತಾದ ಜನವಿರೋಧಿ ನೀತಿಗಳ ವಿರುದ್ಧ ಮುಂಬರುವ ದಿನಗಳಲ್ಲಿ ಬಿಜೆಪಿ ವ್ಯಾಪಕ ಸಾರ್ವಜನಿಕ ಹೋರಾಟ ರೂಪಿಸಲಿದೆ ಎಂದು ಎಂ.ಎಲ್. ಅಶ್ವಿನಿ ಎಚ್ಚರಿಕೆ ನೀಡಿದ್ದಾರೆ.

