ಕಾಸರಗೋಡು: ಸಿರಿಬಾಗಿಲು ಪ್ರತಿಷ್ಠಾನ ಕಲಾಕ್ಷೇತ್ರ ಮಾತ್ರವಲ್ಲ ಇದೊಂದು ಕಲೆಗಳ ಸಂಶೋಧನಾ ಕೇಂದ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವುದು ಸಂತೋಷದ ವಿಚಾರ ಎಂದು ಕಾಸರಗೋಡಿನ ಡಿವೈಎಸ್ಪಿ ಡಾ. ವಿ. ಬಾಲಕೃಷ್ಣನ್ ತಿಳಿಸಿದ್ದಾರೆ.
ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಬಡಗುತಿಟ್ಟಿನ ಖ್ಯಾತ ಬಣ್ಣದ ವೇಷಧಾರಿ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಅವರ ಜನ್ಮ ಶತಮಾನೋತ್ಸವದ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಥಕ್ಕಳಿ ಹಾಗೂ ಯಕ್ಷಗಾನವನ್ನು ಯುವ ಪೀಳಿಗೆಯತ್ತ ಕೊಂಡೊಯ್ಯುವ ಮೂಲಕ ಕಲೆಯನ್ನು ಬೆಳೆಸುವುದರ ಜೊತೆಗೆ ಯುವ ಪೀಳಿಗೆಯು ದುಶ್ಚಟಗಳಿಗೆ ಬಲಿ ಬೀಳದಂತೆ ಜಾಗೃತಿ ಮೂಡಿಸಲು ಸಾಧ್ಯ. ಮುಂದಿನ ದಿನಗಳಲ್ಲಿ ಸಿರಿಬಾಗಿಲು ಪ್ರತಿಷ್ಠಾನದೊಂದಿಗೆ ಕೈಜೋಡಿಸಿ ನಾಟ್ಯರತ್ನ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಅಧ್ಯಯನ ಕೇಂದ್ರ ಕಾರ್ಯಪ್ರವೃತ್ತರಾಗಲು ತಯಾರಾಗಿರುವುದಾಗಿ ತಿಳಿಸಿದರು.
ಹಿರಿಯ ಕಲಾವಿದ ಡಾ. ಎಂ. ಪ್ರಭಾಕರ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಅವರ ಸಂಸ್ಮರಣೆ ನಡೆಸಿದರು. ಈ ಸಂದರ್ಭ ಕಟೀಲು ಮೇಳದ ಹಿರಿಯ ಬಣ್ಣದ ವೇಷಧಾರಿ ಹರಿನಾರಾಯಣ ಭಟ್ ಎಡನೀರು ಇವರಿಗೆ 'ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಡಾ. ವೈಕುಂಠ ಹೇರಳೆ ಸಾಸ್ತಾನ ಅತಿಥಿಯಾಗಿ ಭಾಗವಹಿಸಿದ್ದರು. ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಅವರ ಸುಪುತ್ರ ಮಂಜುನಾಥಯ್ಯ ಸಕ್ಕಟ್ಟು ಅಧ್ಯಕ್ಷತೆ ವಹಿಸಿದ್ದರು. ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಕಾರ್ಯಕ್ರಮ ಸಂಯೋಜನೆ ಮಾಡಿತ್ತು. ಸಂಸ್ಥೆ ಸಂಚಾಲಕ ಉಜಿರೆ ಅಶೋಕ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಹರಿನಾರಾಯಣ ಭಟ್ ಎಡನೀರು ಇವರಿಂದ ಬಣ್ಣದ ವೇಷಗಳ ಪ್ರಾತ್ಯಕ್ಷಿಕೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀಹರಿಭಕ್ತಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಈ ಸಂದರ್ಭ ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಯಕ್ಷಮಿತ್ರರು ಸುಬ್ರಹ್ಮಣ್ಯ ಇದರ ಮುಖಂಡ ಶಿವರಾಮ ಭಟ್ ಇವರನ್ನು ಪ್ರತಿಷ್ಠಾನ ವತಿಯಿಂದ ಗೌರವಿಸಲಾಯಿತು.



