ಕಾಸರಗೋಡು: ಯಕ್ಷಗಾನ ಸಂಘಟನೆಗಳು ನಡೆಸುವ ನಿರಂತರ ಚಟುವಟಿಕೆಗಳು ಯಕ್ಷಗಾನ ಕಲೆಯ ಬೆಳವಣಿಗೆಗೆ ಮಹತ್ವದ ಬುನಾದಿ ಹಾಕಿಕೊಡುತ್ತವೆ ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರು ತಿಳಿಸಿದರು.
ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 'ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ'ದ ರಜತ ಸಂಭ್ರಮದ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. "ಸಂಸ್ಥೆಯೊಂದನ್ನು ಕಟ್ಟುವುದು ಸುಲಭ, ಆದರೆ ಅದನ್ನು ನಿರಂತರವಾಗಿ ಮುನ್ನಡೆಸುವುದು ಸವಾಲಿನ ಕೆಲಸ. ಪದಾಧಿಕಾರಿಗಳು ಹಾಗೂ ಸದಸ್ಯರ ಬದ್ಧತೆ ಮತ್ತು ನಿರಂತರ ಪರಿಶ್ರಮದಿಂದ ಸಂಸ್ಥೆ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ," ಎಂದು ಶ್ಲಾಘಿಸಿದರು.
ಗಣ್ಯರ ಉಪಸ್ಥಿತಿ:
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ (ಐಎಎಸ್) ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಅಗಲಿ ರಾಘವೇಂದ್ರ ರಾವ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ್ ಅಡಪ ಸಂಕಬೈಲು, ವೈದ್ಯಾಧಿಕಾರಿ ಡಾ. ಜಯಶ್ರೀ ನಾಗರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ದಿನೇಶ್, ರಜತರಂಗದ ಅಧ್ಯಕ್ಷ ಡಾ. ಹರಿಕಿರಣ ಬಂಗೇರ, ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ ಕೂಡ್ಲು, ಕೂಡ್ಲು ಮೇಳದ ಸಂಚಾಲಕ ರವಿರಾಜ್ ಕೂಡ್ಲು, ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭಾಗ್, ತಂತ್ರಿ ರಾಮಕಿಶೋರ ಅಸ್ರ, ಹಿರಿಯ ಸದಸ್ಯ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಸ್ಮರಣ ಸಂಚಿಕೆ ಸಂಪಾದಕ ರಾಧಾಕೃಷ್ಣ ಉಳಿಯತ್ತಡ್ಕ ಹಾಗೂ ರಜತರಂಗದ ಉಪಾಧ್ಯಕ್ಷ ನಾಗೇಂದ್ರ ಭಟ್, ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ ಹಾಗೂ ಗುರುವಂದನೆ:
ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಬಿ.ಸಿ. ರೋಡ್ ಅವರಿಗೆ ಪ್ರತಿಷ್ಠಿತ ‘ರಜತರಂಗ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಮಾಂಬಾಡಿ ಸುಬ್ರಹ್ಮಣ್ಯ ಭಟ್, ದಿವಾಣ ಶಿವಶಂಕರ ಭಟ್, ಸಬ್ಬಣ್ಣಕೋಡಿ ಶ್ರೀರಾಮ್ ಭಟ್, ಧರ್ಮೇಂದ್ರ ಬಾಯಾರ್, ರಕ್ಷಿತ್ ಶೆಟ್ಟಿ ಪಡ್ರೆ, ಬಾಲಕೃಷ್ಣ ಆಚೆಗೋಳಿ ಹಾಗೂ ರಂಜಿತ ಗೋಳಿಯಡ್ಕ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಇದೇ ವೇಳೆ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ ನಡೆಯಿತು.
ಕಾರ್ಯಕ್ರಮದಲ್ಲಿ ವಿ.ಜಿ. ಕಾಸರಗೋಡು ಸ್ವಾಗತಿಸಿ, ನಾ. ಕಾರಂತ ಪೇರಾಜೆ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಕೂಡ್ಲು ಧನ್ಯವಾದ ಸಮರ್ಪಿಸಿದರು. ಸಮಾರಂಭದ ನಂತರ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ವತಿಯಿಂದ ‘ಶ್ರೀ ದೇವಿ ಲಲಿತೋಪಾಖ್ಯಾನ’ ಯಕ್ಷಗಾನ ಪ್ರದರ್ಶನಗೊಂಡಿತು.



