ಕಾಸರಗೋಡು: ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ಗಡಿನಾಡು ಕಾಸರಗೋಡಿನ ಸಂಘ–ಸಂಸ್ಥೆಗಳು ಕೈಗೊಳ್ಳುತ್ತಿರುವ ಚಟುವಟಿಕೆಗಳು ಇಡೀ ಸಮಾಜಕ್ಕೆ ಮಾದರಿಯಾಗಿವೆ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ ಟಿ.ಆರ್. ಕೃಷ್ಣಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ‘ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ (ರಿ.)’ ಹಾಗೂ ಬೆಂಗಳೂರಿನ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ಕಾಸರಗೋಡು ಭೌಗೋಳಿಕವಾಗಿ ಕೇರಳದ ಭಾಗವಾಗಿದ್ದರೂ ಭಾವನಾತ್ಮಕವಾಗಿ ಕನ್ನಡಿಗರೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ಭಾಷೆ ಮತ್ತು ಭಾವನೆ ಎರಡೂ ಒಂದೇ. ಗಡಿನಾಡಿನಲ್ಲಿ ಕನ್ನಡವನ್ನು ಉಳಿಸಿ–ಬೆಳೆಸಲು ಹಲವಾರು ಸವಾಲುಗಳಿದ್ದು, ಇಂದಿನ ಪೀಳಿಗೆಯ ಮಕ್ಕಳು ಮಾತೃಭಾಷೆಯಿಂದ ದೂರವಾಗುತ್ತಿರುವುದು ಕಳವಳಕಾರಿ ಸಂಗತಿ" ಎಂದು ಆತಂಕ ವ್ಯಕ್ತಪಡಿಸಿದ ಅವರು, ಕನ್ನಡ ಭವನದ ಪುಸ್ತಕ ಪ್ರೇಮ ಹಾಗೂ ಸಾಂಸ್ಕೃತಿಕ ಕೈಂಕರ್ಯಗಳನ್ನು ಶ್ಲಾಘಿಸಿದರು. ಇದಕ್ಕೂ ಮುನ್ನ ಕನ್ನಡ ಭವನದ ಸಂಸ್ಥಾಪಕ ಡಾ. ವಾಮನ್‌ರಾವ್ ಬೇಕಲ್ ಸಮಾರಂಭವನ್ನು ಉದ್ಘಾಟಿಸಿದರು.
ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ:
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಡಾ. ಸುರೇಶ್ ನೆಗಳಗುಳಿ, ಪ್ರದೀಪ್ ಬೇಕಲ್, ವಸಂತ ಕೆರೆಮನೆ, ಜಗನ್ನಾಥ ಶೆಟ್ಟಿ ಪಿ.ಕೆ., ಅಖಿಲೇಶ್ ನಗುಮುಗಂ, ವಸಂತ ಭಾರಡ್ಕ, ಗುರುರಾಜ್ ಕಾಸರಗೋಡು, ಗಿರೀಶ್ ಪಿ.ಎಂ. ಚಿತ್ತಾರಿ ಹಾಗೂ ಮುರಳಿ ಪಾರೆಕಟ್ಟೆ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಕನ್ನಡ ಸಂಘದ ವತಿಯಿಂದ ಮೂವರು ಪ್ರತಿಭಾನ್ವಿತರಿಗೆ ‘ಅಂತಾರಾಜ್ಯ ರಾಜ್ಯೋತ್ಸವ ಪ್ರಶಸ್ತಿ’ ನೀಡಲಾಯಿತು. ಕನ್ನಡ ಭವನದ ವತಿಯಿಂದ ವಾಣಿಜ್ಯ ತೆರಿಗೆ ಇಲಾಖೆ ಕನ್ನಡ ಸಂಘದ ಎಂಟು ಮಂದಿಗೆ ಗೌರವ ಸನ್ಮಾನ ನೆರವೇರಿತು. ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ದಂಪತಿಗೆ ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆ ಕನ್ನಡ ಸಂಘದ ವತಿಯಿಂದ ‘ಕರ್ನಾಟಕ ರಾಜ್ಯೋತ್ಸವ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರಾದ ಪದ್ಮಾಕರ ಆರ್. ಕುಲಕರ್ಣಿ, ರಮೇಶ್ ಕುಮಾರ್, ವಿ. ಕುಮಾರ್, ಸಹಾಯಕ ಆಯುಕ್ತ ಕೆ. ದೊರೈ, ಕೆ.ಸಿ. ಮಂಜುನಾಥ್, ಕೆ.ಎನ್. ನವೀನ್, ರಾಕೇಶ್ ರಾಥೋಡ್ ಹಾಗೂ ಪ್ರಮುಖರಾದ ಶೋಭಾ, ಸಂಧ್ಯಾರಾಣಿ ಟೀಚರ್, ರಾಜೇಶ್, ಸತೀಶ್ ಕೂಡ್ಲು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ನಡೆದ ಕನ್ನಡ ಜಾಥಾ ಮೆರವಣಿಗೆಗೆ ಕನ್ನಡ ಭವನದ ನಿರ್ದೇಶಕ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಅವರು ಕನ್ನಡ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಗುರುರಾಜ್ ಕಾಸರಗೋಡು ಮತ್ತು ತಂಡದ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯಿಂದ ‘ಸಾಂಸ್ಕೃತಿಕ ಕಲಾವೈಭವ’ ಪ್ರದರ್ಶನಗೊಂಡಿತು.



