ಕೊಲ್ಕತಾ: ಪಶ್ಚಿಮಬಂಗಾಳದಲ್ಲಿ ನಕಲಿ ವೈದ್ಯರ ಪ್ರಮಾಣಪತ್ರಗಳ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, 1996ರಿಂದ ಪಶ್ಚಿಮಬಂಗಾಳ ವೈದ್ಯಕೀಯ ಮಂಡಳಿ ( ಡಬ್ಲ್ಯುಬಿಎಂಸಿ)ಯಲ್ಲಿ ನೋಂದಣಿಯಾಗಿರುವ ಸುಮಾರು 1.1 ಲಕ್ಷ ವೈದ್ಯರ ಶೈಕ್ಷಣಿಕ ಪ್ರಮಾಣ ಪತ್ರವನ್ನು ಸಮಗ್ರವಾಗಿ ಪರಿಶೀಲಿಸಲು ನಿರ್ಧರಿಸಿದೆಯೆಂದು ರಾಜ್ಯದ ಆರೋಗ್ಯ ಸಚಿವ ಶರದ್ವಾತ್ ಮುಖರ್ಜಿ ಅವರು ತಿಳಿಸಿದ್ದಾರೆ.'' ನಮ್ಮ ನೋಂದಣಿ ದಾಖಲೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ನಕಲಿ ವೈದ್ಯರು ನೋಂದಣಿಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದೆಯೆಂದರು ಹೇಳಿದ್ದಾರೆ.
ಅಂತಹ ಎಲ್ಲಾ ವ್ಯಕ್ತಿಗಳ ದಾಖಲೆಗಳನ್ನು ಮರುಪರಿಶೀಲಿಸಲು ತೀರ್ಮಾನಿಸಲಾಗಿದೆಯೆಂದು ಅವರು ಹೇಳಿದ್ದಾರೆ. ರಾಜ್ಯದ 1.1 ಲಕ್ಷ ವೈದ್ಯರಿಗೆ ವಿವಿಧ ವಿಶ್ವವಿದ್ಯಾನಿಲಯಗಳು ನೀಡಿರುವ ಪ್ರಮಾಣ ಪತ್ರಗಳನ್ನು ಹೊಸತಾಗಿ ಮರುಪರಿಶೀಲನೆಗೊಳಪಡಿಸಲಾಗುವುದು ಎಂದವರು ಹೇಳಿದರು.
ಕಳೆದ ಮೂರು ದಶಕಗಳಲ್ಲಿ ವೈದ್ಯಕೀಯ ನೋಂದಣಿ ಪಡೆದ ಪ್ರತಿಯೊಬ್ಬರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೋಧಿಸಲು ಬಾಹ್ಯ ಏಜೆನ್ಸಿಯೊಂದರ ನೆರವು ಪಡೆಯಲಾಗುತ್ತದೆ. ಬ್ಯಾಂಕುಗಳಲ್ಲಿ ಬಳಸಲಾಗುವ ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ಮಾದರಿಯಲ್ಲೇ, ಕೆವೈಡಿ (ನಿಮ್ಮ ವೈದ್ಯರನ್ನು ಅರಿಯಿರಿ) ಎಂಬ ಹೊಸ ಪ್ರಕ್ರಿಯೆನ್ನು ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ನೇರ ಅಥವಾ ವೀಡಿಯೊ ಕಾನ್ಫರೆನ್ಸಿಂಗ್ ಆಧಾರಿತ ಪರಿಶೀಲನಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದವರು ಹೇಳಿದರು.
ವಯೋವೃದ್ಧ ಅಥವಾ ಅನತಿದೂರದಲ್ಲಿರುವ ಮತ್ತು ಪ್ರಯಾಣಿಸಲು ಅಶಕ್ತರಾದವರಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮರುಪರಿಶೀಲನೆ ನಡೆಸಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆಯೊಂದನ್ನು ಹೊರಡಿಸಲಾಗುವುದು ಎಂದವರು ಹೇಳಿದ್ದಾರೆ.
ಬಿಜೆಪಿ ಸರಕಾರದ ಈ ನಿರ್ಧಾರವು ರಾಜ್ಯದಲ್ಲಿ ತೀವ್ರ ರಾಜಕೀಯ ಆರೋಪ-ಪ್ರತ್ಯಾರೋಪದ ಕಿಡಿಯನ್ನು ಹೊತ್ತಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಹಿಂದಿನ ತೃಣಮೂಲ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದು, ಅಂತಹ ವ್ಯವಸ್ಥಿತ ಅಕ್ರಮ ಭಾರತದಲ್ಲಿ ಬೇರೆಲ್ಲೂ ನಡೆದಿರಲಿಕ್ಕಿಲ್ಲವೆಂದು ಪ.ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ತಿಳಿಸಿದ್ದಾರೆ. ಈ ಹಿಂದೆ ನಡೆದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮಾದರಿಯಲ್ಲೇ ವೈದ್ಯರನ್ನು ಕೂಡಾ ಮರುಪರಿಶೀಲನೆಗೊಳಪಡಿಸುವ ಔಚಿತ್ಯವನ್ನು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ್ ರಾಯ್ ಪ್ರಶ್ನಿಸಿದ್ದಾರೆ. ಆರೋಗ್ಯ ಸಚಿವರ ಹೇಳಿಕೆ ಆಧಾರರಹಿತವಾಗಿದ್ದು, ವೈದ್ಯಕೀಯ ಸಮುದಾಯವನ್ನು ಅನಗತ್ಯ ಗೊಂದಲಕ್ಕೆ ತಳ್ಳಲಾಗುತ್ತಿದೆಯೆಂದವರು ಹೇಳಿದ್ದಾರೆ.

