ಮನಸ್ಸು... ಆಲೋಚನೆ.... ಧ್ಯಾನ...ಏನಿದರ ಮರ್ಮ
0
ನವೆಂಬರ್ 26, 2018
ನಮ್ಮ ಮನಸ್ಸಿನೊಳಗೆ ಹಲವಾರು ಭಾವನೆಗಳು ಪ್ರತಿ ಕ್ಷಣದಲ್ಲೂ ಹುಟ್ಟುತ್ತಲೇ ಇರುತ್ತವೆ. ಒಂದಲ್ಲಾ ಒಂದು ಆಲೋಚನೆಗಳು ಬರುತ್ತಲೇ ಇರುತ್ತವೆ. ದಿನದ 24 ಗಂಟೆಗಳಲ್ಲಿ ಸರಿಸುಮಾರು 60000 ಯೋಚನೆಗಳವರೆಗೂ ಬರಬಹುದು ಅಥವಾ ಮನಸ್ಸಿನ ಮೂಲಕ ಹಾದು ಹೋಗಬಹುದು ಎಂದು ಮನಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಈ ಯೋಚನೆಗಳಲ್ಲಿ ನಕಾರಾತ್ಮಕ, ಸಕಾರಾತ್ಮಕ , ಕಾಮ, ಮತ್ಸರ, ಪ್ರೇಮ, ಹೊಟ್ಟೆಕಿಚ್ಚು , ಸಿಟ್ಟು, ದ್ವೇಷ, ಸ್ವಾರ್ಥ, ಮುಂತಾದ ಎಲ್ಲಾ ಭಾವನೆಗಳು ಬರುತ್ತವೆ. ಇದು ಸಹಜವಾಗಿ ಉಪ್ಪು, ಹುಳಿ, ಖಾರ ತಿನ್ನುವ ಎಲ್ಲರಿಗೂ ಈ ಭಾವನೆಗಳು ಬಂದೆ ಬರುತ್ತವೆ. ಆದರೆ, ಅವುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದೇ ಇಲ್ಲಿನ ಮುಖ್ಯ ಪ್ರಶ್ನೆ.
ಒಬ್ಬ ವ್ಯಕ್ತಿಯೊಳಗೆ ಎಷ್ಟು ಕೆಟ್ಟ ಯೋಚನೆ ಬರುತ್ತಿದೆ ಎನ್ನುವುದರ ಮೇಲೆ ಆ ವ್ಯಕ್ತಿಯನ್ನು ಕೆಟ್ಟ ವ್ಯಕ್ತಿಯನ್ನಾಗಿಸಿಬಿಡುವುದಿಲ್ಲ. ಏಕೆಂದರೆ, ಈ ರೀತಿ ಕೆಟ್ಟ ಯೋಚನೆಯೇ ಬಾರದ ವ್ಯಕ್ತಿ ಈ ಭೂಮಿಯಲ್ಲಿಲ್ಲ. ಒಳ್ಳೆಯ ಅಥವಾ ಕೆಟ್ಟ, ಸರಿಯಾದ ಅಥವಾ ತಪ್ಪು, ನೈತಿಕ ಅಥವಾ ಅನೈತಿಕ ಭಾವನೆಗಳು ಇರಬಹುದು. ಇದು ಕೇವಲ ಭಾವನೆ ಅಥವಾ ಆಲೋಚನೆಗಳು ಅಷ್ಟೇ. ಇದು ಕೇವಲ ಆಲೋಚನೆಯ ಹಂತದಲ್ಲಿದ್ದರೆ ಯಾವುದೇ ಹಾನಿ ಇಲ್ಲ. ಇದು ಹೇಗೆಂದರೆ, ನಾವು ನಡೆಯುವ ದಾರಿಯಲ್ಲಿ ಬಿದ್ದ ಮರದ ಟೊಂಗೆಯನ್ನು ಕಟ್ಟಿಗೆಯಾಗಿ ಅಥವಾ ಉರವಲಾಗಿ ಉಪಯೋಗಿಸಬಹುದು, ಊರುಗೋಲಾಗಿ ಬಳಸಬಹುದು. ರಕ್ಷಣಾ ದಂಡವನ್ನಾಗಿ ಬಳಸಬಹುದು. ದಾರಿಯಲ್ಲಿ ಕಾಣುವ ಯಾವುದೋ ಬಡ ಪ್ರಾಣಿಯ ಮೇಲೆ ಈ ಟೊಂಗೆಯನ್ನು ಎಸೆದು ಅದರ ನೋವಿನ ಆನಂದ ಪಡೆಯಹುದು. ಅಥವಾ ದಾರಿಗೆ ಅಡ್ಡಲಾಗಿ ಬಿದ್ದ ಟೊಂಗೆಯನ್ನು ರಸ್ತೆ ಬದಿಗೆ ಹಾಕಿ, ತನ್ನಷ್ಟಕ್ಕೆ ತಾನು ಮುಂದುವರೆಯಬಹುದು. ಇಲ್ಲಿ ಟೊಂಗೆಯದೇನೂ ಪಾತ್ರವಿಲ್ಲ. ಇದನ್ನು ನಾವು ಹೇಗೆ ಬಳಸುತ್ತೇವೆ ಅನ್ನುವುದೇ ಮುಖ್ಯ.
ಹೀಗೆಯೇ, ನಮ್ಮೊಳಗೇ ಬರುವ ಆಲೋಚನೆಗಳ ವಿಷಯದಲ್ಲೂ ಅಷ್ಟೇ. ಅವುಗಳನ್ನು ನಾವು ಹೇಗೆ ತೆಗೆದುಕೊಳ್ಳುತ್ತೇವೆ ಅವು ಹಾಗೆ ಪರಿಣಮಿಸುತ್ತವೆ. ಒಬ್ಬ ಒಳ್ಳೆ ಧ್ಯಾನಸ್ಥ ಸಾಧಕನು ಈ ಆಲೋಚನೆಗಳ ಸ್ವರೂಪವನ್ನು ಹೀಗೆ ಗಮನಿಸುತ್ತಾನೆ. ಎಷ್ಟು ಚಂಚಲ? ಎಷ್ಟು ಬಾಲಿಶ? ಎಷ್ಟು ನಿಷ್ಪ್ರಯೋಜಕ? ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಸುಮ್ಮನಿರುತ್ತಾನೆ. ಕೇವಲ ಸಾಕ್ಷಿ ಭಾವದಲ್ಲಿ ಮಾತ್ರ ನೋಡುತ್ತಾನೆ. ಆಗ ಅವು ಬಂದ ಹಾಗೆ ಯೋಚನೆಗಳು ಹೊರಡಲು ಪ್ರಾರಂಭಿಸುತ್ತವೆ. ಈ ಆಲೋಚನೆಗಳು ಬಂದಾಗ ನಾವು ಸ್ವಲ್ಪ ತಾಳ್ಮೆಯಿಂದ ಅದರ ಸ್ವರೂಪವನ್ನು ಅರ್ಥಮಾಡಿಕೊಂಡು ಪ್ರತಿಕ್ರಿಯೆ ನೀಡದೆ ಹೋದರೆ ಅದು ತನ್ನ ತಾಣವನ್ನೇ ಕಳೆದುಕೊಂಡು ಬಿಡುತ್ತದೆ. ಆಗಲೇ ಮನಸ್ಸು ಹಗುರವಾಗುತ್ತದೆ. ಈ ಶಕ್ತಿ ಸಿದ್ಧಿಸ ಬೇಕಾದರೆ ಧ್ಯಾನ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ಪ್ರತಿನಿತ್ಯ ಧ್ಯಾನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಮ್ಮ ಮನಸ್ಸು, ದೇಹ ಪ್ರಪುಲ್ಲಿತವಾಗಿ ಚೈತನ್ಯ ತುಂಬುತ್ತದೆ.


