ಕರಡು ವಾರ್ಷಿಕ ಯೋಜನೆ- ಅಭಿವೃದ್ಧಿ ವಿಚಾರ ಸಂಕಿರಣ
0
ಡಿಸೆಂಬರ್ 12, 2018
ಕಾಸರಗೋಡು: ಪೆರಿಯ ಏರ್ ಸ್ಟ್ರಿಪ್ ಯೋಜನೆ ಅನುಷ್ಠಾನಗೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಯೋಗದಾನ ಲಭಿಸಲಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ 2019-20ನೇ ವರ್ಷದ ಕರಡು ವಾರ್ಷಿಕ ಯೋಜನೆ ಅಂಗವಾಗಿ ನಡೆದ ಅಭಿವೃದ್ಧಿ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಜಲದುರಂತದ ನಂತರ ರಾಜ್ಯವನ್ನು ಸುಸ್ಥಿತಿಗೆ ತರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡಿಗೆ ದುರಂತ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡದೇ ಇದ್ದರೂ, ಮುಂದಿನ ತಿಂಗಳಿಂದ ಜಿಲ್ಲೆ ತೀವ್ರತರ ನೀರಿನ ಬರ ಅನುಭವಿಸಬೇಕಾದ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಗ್ರಾಮ-ಬ್ಲೋಕ್-ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಜಾಗರೂಕತೆ ಹೊಂದಬೇಕಾದುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದವರು ತಿಳಿಸಿದರು.
ಚಟ್ಟಂಚಾಲ್ ನಲ್ಲಿ 50 ಕೋಟಿ ರೂ.ವೆಚ್ಚದ ಗೇಲ್ಪೈಪ್ ಲೈನ್ ಮೂಲಕ ನೇರವಾಗಿ ಇಂಧನ ಸಂಗ್ರಹಿಸಿ ಪವರ್ ಪ್ಲಾಂಟ್ ಸ್ಥಾಪನೆಗೆ ಬೇಕಾದ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಅತ್ಯಾಧುನಿಕ ಸ್ಮಶಾನ ನಿರ್ಮಾಣಕ್ಕೆ 6 ಗ್ರಾಮಪಂಚಾಯತ್ಗಳಲ್ಲಿ ಯೋಜನೆಗಳಿವೆ. ಜಿಲ್ಲೆಯ ಜೈವಿಕ ಆಸ್ತಿ, ಜಲಸಂಪತ್ತು ಸಂರಕ್ಷಣೆಗೆ ಅನೇಕ ಯೋಜನೆಗಳು ಇದ್ದು, ಇವಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಮನೆಯಿಲ್ಲದವರು, ಎಂಡೋಸಲ್ಫಾನ್ ಸಂತ್ರಸ್ತರು, ವಿಕಲಚೇತನರು, ಹಿಂದುಳಿದ ಜನಾಂಗದವರು ಮೊದಲಾದವರ ಅಭ್ಯುದಯ ಯೋಜನೆಗೆಳಿಗೆ, ಮಹಿಳಾ ಪ್ರಬಲೀಕರಣ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ಮುಂದಿನ ವರ್ಷ ಶಾಲಾ ಕಲೋತ್ಸವ ಜಿಲ್ಲೆಯಲ್ಲಿ ನಡೆಸಲು ಮಂಜೂರಾತಿ ಲಭಿಸಿರುವ ವಿಚಾರ ನಾಡಿಗೆ ಸಂತಸತಂದಿದೆ ಎಂದು ನುಡಿದರು.
ವಿಚಾರಸಂಕಿರಣದಲ್ಲಿ ಜಿಲ್ಲಾ ಪಂಚಾಯತ್ ಉಪಧ್ಯಕ್ಷೆ ಶಾಂತಮ್ಮ ಫಿಲಿಪ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಹರ್ಷಾದ್ ವರ್ಕಾಡಿ ವಾರ್ಷಿಕ ಯೋಜನೆ ಪ್ರಸ್ತುತಪಡಿಸಿದರು. ಸಾರ್ವಜನಿಕ, ಪರಿಶಿಷ್ಟ ಜಾತಿ-ಪಂಗಡದವರಿಗಾಗಿ 35,81,37,000 ರೂ., ರಸ್ತೆ-ಇತರ ನವೀಕರಣ ಚಟುವಟಿಕೆಗಳಿಗೆ 39,99,82,00 ರೂ. ಮೀಸಲಿರಿಸಲಾಗಿದೆ. ಉತ್ಪಾದನೆ ವಲಯ, ಶುಚಿತ್ವ , ತ್ಯಾಜ್ಯ ಪರಿಷ್ಕರಣೆ, ಮಹಿಳಾ ಘಟಕ ಯೋಜನೆ, ಮಕ್ಕಳ, ವಿಕಲಚೇತನರ, ವಯೋವೃದ್ಧರ ಕಲ್ಯಾಣ ಯೋಜನೆಗಳು, ವಸತಿ ಯೋಜನೆ, ಲೈಫ್, ಪಿ.ಎಂ.ಎ.ವೈ. ಸಹಿತ ಯೋಜನೆಗಳಿಗೆ ಒಟ್ಟು 28,33,37,000 ರೂ.ಬಡ್ಜ್ ರೂಪದಲ್ಲಿ ಮೀಸಲಿರಿಸಲಾಗಿದೆ.
ಜಿಲ್ಲಾ ಯೋಜನಾಧಿಕಾರಿ ಎಸ್.ಸತ್ಯಪ್ರಕಾಶ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಪದಾಧಿಕಾರಿಗಳಾದ ಫರೀದಾ ಝಕೀರ್ ಅಹಮ್ಮದ್, ನ್ಯಾಯವಾದಿ ಎ.ಪಿ.ಉಷಾ, ಸದಸ್ಯರಾದ ಶಾನವಾಝ್ ಪಾದೂರು, ಡಾ.ವಿ.ಪಿ.ಮುಸ್ತಫಾ, ನೀಲೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ವಿ.ಪಿ.ಜಾನಕಿ, ಗ್ರಾಮಪಂಚಾಯತ್ ಅಸೋಸಿಯೇಶನ್ ಅಧ್ಯಕ್ಷ ಎ.ಎ.ಜಲೀಲ್ ಮೊದಲಾದವರು ಉಪಸ್ಥಿತರಿದ್ದರು. ನಂದಕುಮಾರ್ ಸ್ವಾಗತಿಸಿದರು. ಎಂ.ಎಂ.ಷಂಸಾದ್ ವಂದಿಸಿದರು.


