HEALTH TIPS

ಸಮಷ್ಠಿ ಪ್ರಾರ್ಥನೆಯಿಂದ ಧರ್ಮರಕ್ಷಣೆಯ ಬಲ ಲಭಿಸುತ್ತದೆ-ವಿದ್ಯಾಪ್ರಸನ್ನ ಶ್ರೀ

 
         ಬದಿಯಡ್ಕ: ಪ್ರಪಂಚಕ್ಕೆ ಶ್ರೇಯಸ್ಸನ್ನು ಬಯಸುವ ಭಾರತೀಯ ಮಂತ್ರಗಳು, ಋಷಿಮುನಿಗಳ ತಪಸ್ಸು, ಸಾಧನೆಯ ಫಲದಿಂದಾಗಿ ಭೂಮಿಯು ಸಮತೋಲನವನ್ನು ಕಾಪಾಡಿಕೊಳ್ಳಲು ಕಾರಣವಾಗಿದೆ. ಸಾಧಕ ಪುರುಷರ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮ ಮತ್ತು ಸಂಸ್ಕಾರಗಳಿಂದ ಅತ್ಯಂತ ಶ್ರೇಷ್ಠ ಸ್ಥಾನ ನಮಗೆ ಲಭಿಸುತ್ತದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನುಡಿದರು.
ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ದಶಮಾನೋತ್ಸವ ಮತ್ತು ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವದ ಅಂಗವಾಗಿ ಶನಿವಾರ ನಡೆದ  ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿದರು.
    ಕೆಟ್ಟವರ ಮಧ್ಯದಲ್ಲಿ ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಮಹತ್ತರವಾದ ಹೊಣೆ ನಮ್ಮ ಮೇಲಿದೆ. ಎಲ್ಲರಿಗೂ ಶಾಂತಿ ನೆಮ್ಮದಿ ಲಭಿಸುವಂತಹ ಶ್ರೇಷ್ಠ ಭೂಮಿಯಾಗಿದೆ ನಮ್ಮ ಭಾರತ. ಇತರರ ಆಮಿಷಗಳಿಗೆ ಒಳಗಾಗದಂತೆ ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸುವಂತಾಗಬೇಕು. ಪ್ರತೀದಿನ ಸೂರ್ಯೋದಯ ಹಾಗೂ ಸೂರ್ಯಾಸ್ತಗಳ ಸಂದರ್ಭದಲ್ಲಿ ಕೆಟ್ಟ ಕೆಲಸಗಳನ್ನು ಮಾಡಬಾರದು. ದೇವರ ನಾಮಸ್ಮರಣೆಯನ್ನು ಮಾಡುವುದರಿಂದ ಧನಾತ್ಮಕ ಅಂಶಗಳು ವೃದ್ಧಿಯಾಗುತ್ತವೆ.  ಸಮಷ್ಠಿಯ ಪ್ರಾರ್ಥನೆಯಿಂದ ಹೆಚ್ಚು ಫಲ ಲಭಿಸುತ್ತದೆ ಎಂಬುದನ್ನು ಮನಗಂಡು ಹಿರಿಯರು ದೇವಸ್ಥಾನ, ಭಜನಾಮಂದಿರಗಳಂತಹ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಿದ್ದಾರೆ.
ಧರ್ಮದ ಉಳಿವಿಗಾಗಿ ಹೋರಾಡುವ ಜನಪ್ರತಿನಿಧಿಗಳನ್ನು ನಾವು ಆಯ್ಕೆಮಾಡಿಕೊಳ್ಳಬೇಕಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಶಿಖರವನ್ನು ಎತ್ತಿಹಿಡಿಯುವ ನಾಯಕನನ್ನು ಆರಿಸಬೇಕು. ಸ್ವಧರ್ಮವನ್ನು ಕಾಪಾಡಿಕೊಳ್ಳುವ ಮೂಲಕ ಭಾರತ ಮಾತೆಯ, ಸನಾತನ ಧರ್ಮದ ಉಳಿವಿಗಾಗಿ ಹೋರಾಡಬೇಕಾಗಿದೆ ಎಮದು ಶ್ರೀಗಳು ತಿಳಿಸಿದರು.
  ಗುರುಸ್ವಾಮಿಗಳಾದ ಪಂಜಜೆ ರಾಮಕೃಷ್ಣ ಭಟ್ ಮುಳ್ಳೇರಿಯ ಹಾಗೂ ಗಣ್ಯರು ದೀಪ ಬೆಳಗಿಸಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ ಸಮಾರಂಭದ ಅಧ್ಯಕ್ಷತೆ ವಹಿಸಿಮಾತನಾಡಿ, ದೇವಾಲಯ ಆರಾಧನಾಲಯಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುವ ಶ್ರದ್ಧಾಕೇಂದ್ರಗಳಾಗಿವೆ. ಅವುಗಳನ್ನು ರಕ್ಷಿಸುವಂತಹ ಮಹತ್ತರವಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
   ಶಬರಿಮಲೆ ಶ್ರೀ ಅಯ್ಯಪ್ಪ ಸೇವಾಸಮಾಜಂನ ಕೇರಳ ರಾಜ್ಯ ಅಧ್ಯಕ್ಷ ಸ್ವಾಮಿ ಅಯ್ಯಪ್ಪ ದಾಸ್ ಧಾರ್ಮಿಕ ಪ್ರವಚನವನ್ನು ನೀಡುತ್ತಾ 1951ನೇ ಇಸವಿಯಿಂದಲೇ ಹಿಂದುಗಳ ಶ್ರದ್ಧಾಕೇಂದ್ರವಾದ ಶಬರಿಮಲೆ ಕ್ಷೇತ್ರವನ್ನು ನಾಶಗೊಳಿಸುವ ಯತ್ನ ನಡೆದಿದೆ. 1956ರಲ್ಲಿ ಶಬರಿಮಲೆಯ ಹಾಳುಗೆಡವಲು ಯತ್ನಿಸಿದವರ ವಿರುದ್ಧ ತನಿಖೆಯನ್ನು ನಡೆಸುತ್ತೇವೆ ಎಂಬ ವಾಗ್ದಾನವನ್ನು ನೀಡಿ ಅಧಿಕಾರಕ್ಕೆ ಬಂದು 6 ಜನ ಮುಖ್ಯಮಂತ್ರಿಗಳು ಅದೆಷ್ಟೋ ಕಾಲ ರಾಜ್ಯವನ್ನಾಳಿದರೂ ಆ ಕಾರ್ಯಕ್ಕೆ ಇಳಿಯದಿರುವುದು ಖೇದಕರ ವಿಚಾರವಾಗಿದೆ. ಇದೀಗ ಸುಪ್ರೀಂಕೋರ್ಟ್ ಆದೇಶದ ನೆಪವೊಡ್ಡಿ ಶಬರಿಮಲೆ ಆಚಾರ ಅನುಷ್ಠಾನಗಳನ್ನು ಹಾಳುಗೆಡಹುವ ಮೂಲಕ ಹಿಂದೂ ಸಂಸ್ಕೃತಿಗೆ ಕೊಡಲಿಯೇಟನ್ನು ನೀಡಲು ಸರಕಾರವು ಯತ್ನಿಸುತ್ತಿದೆ. 3 ಅಣೆಕಟ್ಟುಗಳ ಅಸಮರ್ಪಕವಾದ ನಿರ್ವಹಣೆಯ ಮೂಲಕ ರಾಜ್ಯದ ಮಂತ್ರಿಯೋರ್ವರಿಂದ ಜನಸಾಮಾನ್ಯರು ಕಷ್ಟಪಡುವಂತಾಗಿದೆ. ಏಕಕಾಲಕ್ಕೆ 3 ಅಣೆಕಟ್ಟುಗಳನ್ನು ತೆರದುಬಿಡುವ ಮೂಲಕ ನೆರೆ ಬರುವಂತೆ ಮಾಡಿದ್ದಾರೆ ಎಂದರು. ತಾಮಸ ಭಾವದಲ್ಲಿ ಜೀವಿಸುವ ವ್ಯಕ್ತಿ ಕ್ಷೇತ್ರಗಳ ದರ್ಶನದಿಂದ ಸಾತ್ವಿಕ ಭಾವವನ್ನು ತಳೆಯುತ್ತಾನೆ. ವ್ರತಾಚರಣೆ ಸಮಯದಲ್ಲಿ ನಾವು ಆಚರಿಸುವ ಕಟ್ಟುನಿಟ್ಟಿನ ಜೀವನಕ್ರಮದಿಂದ ಧನಾತ್ಮಕ ಅಂಶಗಳು ವೃದ್ಧಿಯಾಗುತ್ತದೆ ಎಂದರು.
ಕುಂಬ್ಡಾಜೆ ಗ್ರಾಮಪಂಚಾಯತಿ ಉಪಾಧ್ಯಕ್ಷ ಆನಂದ ಕೆ.ಮವ್ವಾರು, ಉದ್ಯಮಿ ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷ ಉದ್ಯಮಿ ಮಧುಸೂದನ ಆಯರ್ ಶುಭಾಶಂಸನೆಗೈದರು.
ಅನಿತಾ ಕುರುಮುಜ್ಜಿ ಕಿರುವರದಿ ಮಂಡಿಸಿದರು. ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ ಅವರನ್ನು ಈ ಸಂದರ್ಭದಲ್ಲಿ ಶ್ರೀಗಳು ಶಾಲುಹೊದೆಸಿ ಫಲಮಂತ್ರಾಕ್ಷತೆಯನ್ನಿತ್ತು ಸಮಿತಿಯ ವತಿಯಿಂದ ಸನ್ಮಾನಿಸಿದರು. ರಾಜಾರಾಮ ಪೆರ್ಲ ಸನ್ಮಾನಿತರ ಪರಿಚಯವನ್ನು ಮಾಡಿದರು. ವಿಶಿಷ್ಠವಾದ ಗುರುವಂದನೆ ಕಾರ್ಯಕ್ರಮ ನಡೆಯಿತು. ಗುರುಸ್ವಾಮಿಗಳಾದ ಶ್ರೀನಿವಾಸ ಭಟ್ ಮುಂಡೋಳಿ, ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು, ನಾರಾಯಣ ಮುಖಾರಿ ಕುರುಮುಜ್ಜಿ, ಸಂಜೀವ ರೈ ದೇಲಂಪಾಡಿ, ಭಾಸ್ಕರ ಮಾವಿನಕಟ್ಟೆ ಅವರಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು. ಅನ್ನದಾನ ಸೇವೆಯಲ್ಲಿ ಪಾಲ್ಗೊಂಡವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಿವೃತ್ತ ಅಧ್ಯಾಪಕ ರಾಮಚಂದ್ರ ಭಟ್ ಉಪ್ಪಂಗಳ ಕಾರ್ಯಕ್ರಮ ನಿರೂಪಣೆಗೈದರು. ನಂದಕಿಶೋರ್ ಮರಿಕ್ಕಾನ ಪ್ರಾರ್ಥನೆಗೈದರು. ದಶಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಭಟ್ ಕೋಟೆ ಶಿರಂತಡ್ಕ ಸ್ವಾಗತಿಸಿ, ಕಾರ್ಯದರ್ಶಿ ನಾರಾಯಣ ಕೆ.ಎಮ್. ವಂದಿಸಿದರು.
     ಪ್ರತಿಷ್ಠೆ:
   ಅನ್ನಪೂರ್ಣ ಸರ್ಕಲ್ ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದಲ್ಲಿ ಶನಿವಾರ ವೇದಘೋಷ, ಚೆಂಡೆಮೇಳದೊಂದಿಗೆ ತಂತ್ರಿವರ್ಯ ಬ್ರಹ್ಮಶ್ರೀ ಡಾ. ಬಳ್ಳಪದವು ಮಾಧವ ಉಪಾಧ್ಯಾಯರ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಶ್ರೀ ದೇವರ ಛಾಯಾಚಿತ್ರ ಪುನಃಪ್ರತಿಷ್ಠೆ ಕಾರ್ಯ ನಡೆಯಿತು. ಬೆಳಿಗ್ಗೆ 12 ಕಾಯಿಗಳ ಗಣಪತಿ ಹೋಮ, ಲಕ್ಷಾರ್ಚನೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ, ಶ್ರೀ ದೇವರಿಗೆ ಪಂಚಗವ್ಯ, ಕಲಶಾಭಿಷೇಕ, ದ್ವಾದಶ ಮೂರ್ತಿ ಆರಾಧನೆ, ಮಹಾಪೂಜೆ ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಹರಿನಾರಾಯಣ ಕೋಟೆ ಶಿರಂತಡ್ಕ ಅನ್ನದಾನದ ಸೇವಾಕರ್ತರಾಗಿದ್ದರು. ಅಪರಾಹ್ನ ಬೆದ್ರಂಪಳ್ಳ ಶ್ರೀ ಗಣೇಶ ಭಜನ ಮಂದಿರದ ವತಿಯಿಂದ ಭಜನೆ, ಸಂಜೆ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಭಾನುವಾರ (ಡಿ.30ರಂದು) ಪ್ರಾತಃಕಾಲ ಗಣಪತಿ ಹೋಮ, ಶ್ರೀ ಶನೈಶ್ಚರ ಪೂಜೆ, ಸೂರ್ಯನಾರಾಯಣ ಭಟ್ ಮಿತ್ತೂರು ಪಾಲಕ್ಕಾಡ್ ಮತ್ತು ಬಳಗದವರಿಂದ ಸಾಂಪ್ರದಾಯಿಕ ವಿಶೇಷ ಭಜನ ಕಾರ್ಯಕ್ರಮ, ಅಪರಾಹ್ನ ಯಕ್ಷಗಾನ ತಾಳಮದ್ದಳೆ, ಸಾಯಂ 6.30ಕ್ಕೆ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಿಂದ ವೈಭವದ ಪಾಲೆಕೊಂಬು ಮೆರವಣಿಗೆ, ರಾತ್ರಿ 7.30ಕ್ಕೆ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಶಿಷ್ಯವೃಂದದವರಿಂದ ನೃತ್ಯಾಂಜಲಿ-2018, ರಾತ್ರಿ ಮಹಾಪೂಜೆ, ಅನ್ನದಾನ, 11.30ಕ್ಕೆ ಲಕ್ಕೀ ಕೂಪನ್ ಡ್ರಾ, ಅಯ್ಯಪ್ಪನ್ ಪಾಟು, ಪೊಲಿಪಾಟು, ಪ್ರಾತಃಕಾಲ 2.30 ತಾಲಪ್ಪೊಲಿ, ಅಗ್ನಿಸ್ಪರ್ಶ, ತಿರಿಉಯಿಚ್ಚಿಲ್, ಅಯ್ಯಪ್ಪ ವಾವರ್ ಯುದ್ಧ, ತಿರುವಿಳಕ್ಕ್ ಉತ್ಸವದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡಿ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries