ಬದಿಯಡ್ಕ: ಸಂಪ್ರದಾಯದ ಆಧಾರದಲ್ಲಿ ಭಾರತವು ನೆಲೆ ನಿಂತಿದೆ. ಅದನ್ನು ಪೋಷಿಸಬೇಕಾಗಿರುವುದು ನಮ್ಮ ಧರ್ಮವಾಗಿದೆ. ಭಾರತೀಯ ಪರಂಪರೆಯನ್ನು ಉಳಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಟನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಅಭಿಪ್ರಾಯಪಟ್ಟರು.
ಅವರು ಭಾನುವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬದಿಯಡ್ಕ ಹಾಗೂ ಪಳ್ಳತ್ತಡ್ಕ ಇದರ ಸಂಯುಕ್ತಾಶ್ರಯದಲ್ಲಿ ಬದಿಯಡ್ಕ ಹಾಗೂ ಪಳ್ಳತ್ತಡ್ಕ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧನಾತ್ಮಕ ಚಿಂತನೆಗಳಿಂದ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ನಾಡು ಪ್ರಗತಿ ಹೊಂದುವುದಲ್ಲದೆ, ದೇಶದ ಬೆನ್ನೆಲುಬಾದ ಹಳ್ಳಿಗಳಲ್ಲಿ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುತ್ತದೆ. ಹಳ್ಳಿಯಲ್ಲಿ ಕೃಷಿ ಅಭಿವೃದ್ಧಿಯನ್ನು ಕಂಡರೆ ಮಾತ್ರ ದೇಶ ಪ್ರಗತಿಯನ್ನು ಹೊಂದಲು ಸಾಧ್ಯ. ಗ್ರಾಮೀಣ ಪ್ರದೇಶಗಳಲ್ಲಿ ಸಂಘಟನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಇಂತಹ ಸಂಘಟನೆಗಳು ಪ್ರಧಾನ ಕಾರಣವಾಗಿದೆ. ನೂತನ ಆವಿಷ್ಕಾರಗಳನ್ನು ತರುವ ಮೂಲಕ ಗ್ರಾಮೀಣ ಜನತೆಯಲ್ಲಿ ಬದಲಾವಣೆಯ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಚಂದ್ರಗಿರಿ ವಲಯದ ಮೇಲ್ವಿಚಾರಕರಾದ ಚಂದ್ರಶೇಖರ ಮಾತನಾಡುತ್ತಾ ಸರಕಾರವು ಮಾಡಬೇಕಾದಂತಹ ಅದೆಷ್ಟೋ ಸೇವೆಗಳನ್ನು ಜನರ ಪುರೋಗತಿಗಾಗಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಹೆಗ್ಗಡೆಯವರು ಹಮ್ಮಿಕೊಂಡಿದ್ದಾರೆ. ಪ್ರತೀ ಹಳ್ಳಿಗಳಿಗೂ ಯೋಜನೆಯ ಉದ್ದೇಶಗಳನ್ನು ತಲುಪಿಸುವ ಮೂಲಕ ಬಡ ಜನತೆಗೆ ಬದುಕನ್ನು ಕಟ್ಟಿಕೊಡುವಲ್ಲಿ ಸಹಾಯಕವಾಗಿದೆ ಎಂದರು. ಬದಿಯಡ್ಕ ಗ್ರಾಮಪಂಚಾಯತ್ ಸದಸ್ಯ ವಿಶ್ವನಾಥ ಪ್ರಭು ಕರಿಂಬಿಲ ಮಾತನಾಡುತ್ತಾ ಊರಿನಲ್ಲಿ ಯಾವುದೇ ಒಂದು ಕಾರ್ಯಗಳು ನಡೆಯಬೇಕಾದರೆ ಅಲ್ಲಿ ಧರ್ಮಸ್ಥಳದ ಹೆಸರು ಬಂದೇ ಬರುತ್ತದೆ. 90% ಮಂದಿ ಮದ್ಯದ ವ್ಯಸನದಿಂದ ಮುಕ್ತರಾಗಿ ಸಂತೃಪ್ತ ಜೀವನ ನಡೆಸಲು ಧರ್ಮಸ್ಥಳದ ವತಿಯಿಂದ ನಡೆಯುವ ಮದ್ಯವರ್ಜನ ಶಿಬಿರಗಳೇ ಕಾರಣವಾಗಿದೆ ಎಂದರು. ನೂತನವಾಗಿ ಮಾಡತ್ತಡ್ಕ ಹಾಗೂ ಪಳ್ಳತ್ತಡ್ಕ ಒಕ್ಕೂಟಗಳ ಪದಗ್ರಹಣವೂ ನಡೆಯಿತು. ಪಳ್ಳತ್ತಡ್ಕ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಗೋವಿಂದ ನಾಯ್ಕ ಕುಂಟಾಲುಮೂಲೆ, ಮಾಡತ್ತಡ್ಕ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಸುವರ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯ ನಿತಿನ್ ಫಲಾನುಭವಿಗಳಿಗೆ ಸೋಲಾರ್ ಪ್ಯಾನಲ್ ಹಸ್ತಾಂತರಿಸಿದರು. ಪಳ್ಳತ್ತಡ್ಕ ಒಕ್ಕೂಟದ ನೂತನ ಅಧ್ಯಕ್ಷೆ ಸರಸ್ವತಿ ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಕವಿತಾ ವರದಿ ಮಂಡಿಸಿದರು. ಸೇವಾಪ್ರತಿನಿಧಿ ಜಲಜಾಕ್ಷಿ ಸ್ವಾಗತಿಸಿ, ಒಕ್ಕೂಟದ ಸದಸ್ಯೆ ಬಿಂದು ಧನ್ಯವಾದವನ್ನಿತ್ತರು. ಬದಿಯಡ್ಕ ವಲಯ ಮೇಲ್ವಿಚಾರಕ ಧನಂಜಯ ಕಾರ್ಯಕ್ರಮ ನಿರೂಪಣೆಗೈದರು.





