ಕರ್ಗಲ್ಲ ಪ್ರದೇಶದಲ್ಲಿ ಸಮೃದ್ಧ ತರಕಾರಿ ಬೆಳೆ : ಶಾಲಾ ಮಕ್ಕಳ ಯಶೋಗಾಥೆ
0
ಡಿಸೆಂಬರ್ 12, 2018
ಕಾಸರಗೋಡು: ಇದು ನಿಜವಾಗಿಯೂ ಇತರೆಡೆಗೆ ಮಾದರಿ ಹೌದೇ ಹೌದು. ಜೊತೆಗೆ ಶಿಕ್ಷಣದ ಮೂಲ ಸ್ವರೂಪ ಸಾಧ್ಯವಾಗಿಸಿದ ನೈಜ ಯಶೋಗಾಥೆ! ಶಾಲಾ ವಾತಾವರಣದ ಕರ್ಗಲ್ಲ ಪಾರೆಯಲ್ಲಿ ಮಕ್ಕಳು ನಡೆಸಿದ ತರಕಾರಿ ಬೆಳೆ ಇಂತಹದೊಂದು ಯಶೋಗಾಥೆಗೆ ಕಾರಣವಾಗಿದೆ.
ಹರಿತ ಕೇರಳಂ ಮಿಷನ್ ಮತ್ತು ಕೃಷಿ ಇಲಾಖೆಗಳ ಸಹಕಾರದೊಂದಿಗೆ ಕೊಡಕ್ಕಾಡ್ ಸರಕಾರಿ ವೆಲ್ಫೇರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾದ ಸಂಸ್ಥೆ ಮಟ್ಟದ ತರಕಾರಿ ಕೃಷಿಯ ಮೊದಲ ಹಂತದ ಕೊಯ್ಲು ಸಫಲವಾಗಿದೆ.
ಶಾಲೆಯ ಆವರಣದಲ್ಲಿರುವ ಅರ್ಧ ಎಕ್ರೆ ಕರ್ಗಲ್ಲ ಪ್ರದೇಶದಲ್ಲಿ ಈ ಬೆಳೆಯನ್ನು ವಿದ್ಯಾರ್ಥಿಗಳು ನಡೆಸಿದ್ದಾರೆ. ಅಲಸಂಡೆ, ಮುಳ್ಳುಸೌತೆ, ಹರಿವೆ, ಪಡವಲಕಾಯಿ, ಮೆಣಸು, ಬದನೆ, ಮರಗೆಣಸು, ಫ್ಯಾಷನ್ ಫ್ರುಟ್,ಕಲ್ಲಂಗಡಿ, ಟೊಮೆಟೊ, ಕುಂಬಳಕಾಯಿ, ಸೌತೆಕಾಯಿ ಇತ್ಯಾದಿಗಳ ಸಮೃದ್ಧ ಬೆಳೆ ನಾಡಿಗೆ ಅಭಿಮಾನವಾಗಿವೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕೊಯ್ಲಿನ ಉದ್ಘಾಟನೆ ನಡೆಸಿದರು. ಈ ಸಂಬಂಧ ನಡೆದ ಸಭೆಯಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ಟಿ.ವಿ.ಶ್ರೀಧರನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಹರಿತಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಕುಂಞÂರಾಮನ್ ಮಾಸ್ಟರ್, ನೀಲೇಶ್ವರ ಕೃಷಿ ಸಹಾಯಕ ನಿರ್ದೇಶಕಿ ಡಾ.ವೀಣಾರಾಣಿ, ಉಪಜಿಲ್ಲಾ ಶಿಕ್ಷಣ ಅಧಿಕಾರಿ ಎಂ.ಕೆ.ವಿಜಯಕುಮಾರ್, ಮುಖ್ಯಶಿಕ್ಷಕ ಕೆ.ಟಿ.ವಿ.ನಾರಾಯಣನ್, ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷ ಸುರೇಶ್ ಪಿ.ಎಸ್., ಮಾತೃಸಂಘ ಅಧ್ಯಕ್ಷೆ ಶ್ರೀಜಾ ಎ. ಉಪಸ್ಥಿತರಿದ್ದರು.


