ವನಿತಾ ಸ್ವಾವಲಂಬನೆಗೆ ಮಾದರಿಯಾಗಿರುವ ಸಫಲಂ ಕುಟುಂಬಶ್ರೀ ಮಿಶನ್ ಮೂಲಕ ಅಸ್ತಿತ್ವಕ್ಕೆ ಬಂದ ಗೇರು ಘಟಕದ ಮೂಲಕ ಕೋಟಿ ರೂ. ಆದಾಯ
0
ಡಿಸೆಂಬರ್ 12, 2018
ಕಾಸರಗೋಡು: ಜಿಲ್ಲೆಯ ಒಟ್ಟು 13 ಗ್ರಾ.ಪಂ ಗಳಲ್ಲಿ ಚಾಲ್ತಿಯಲ್ಲಿರುವ ಸಫಲಂ ಗೇರು ಬೀಜ ಸಂರಕ್ಷಣಾ ಘಟಕದ ಮೂಲಕ ಜಿಲ್ಲೆಯ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. 2009 ರಲ್ಲಿ ಕುಟುಂಬಶ್ರೀ ಜಿಲ್ಲಾ ಮಿಶನ್ ಮತ್ತು ಜಿಲ್ಲಾ ಪಂಚಾಯತ್ ಸಂಯುಕ್ತವಾಗಿ ಆರಂಭಿಸಿದ ಯೋಜನೆ ಇದಾಗಿದೆ. ಪ್ರಸ್ತುತ ಹಲವು ಮಹಿಳೆಯರು ವರದಾನವಾಗಿರುವ ಯೋಜನೆಯ ಮೂಲಕ 2017-18 ರ ಸಾಲಿನಲ್ಲಿ ಒಟ್ಟು 1.07 ಕೋಟಿ ರೂ. ಗೇರು ಬೀಜ ಮಾರಾಟ ನಡೆಸಲಾಗಿದೆ. ಈ ಬಾರಿ ಜಲಪ್ರಳಯದ ಕಾರಣ ವ್ಯಾಪಾರ ಕುಂಟಿತಗೊಂಡಿದ್ದರೂ ಒಟ್ಟು 68 ಲಕ್ಷ ರೂ. ಗೇರು ಬೀಜ ಈ ತನಕ ಮಾರಾಟವಾಗಿದೆ. ಮಾರ್ಚ್ ತಿಂಗಳು ಪೂರ್ಣಗೊಳ್ಳುವ ವೇಳೆ 1 ಕೋಟಿ ರೂ. ಗೇರು ಮಾರಾಟ ಸಾಧ್ಯವಾಗಲಿದೆ ಎಂದು ಸಫಲಂ ಅಧಿಕೃತರು ತಿಳಿಸಿದ್ದಾರೆ.
ಆರಂಭದಲ್ಲಿ ಕೇವಲ 65 ಮಂದಿ ಮಹಿಳೆಯರ ಮೂಲಕ ಆರಂಭಗೊಂಡ ಉದ್ಯಮವು, ಪ್ರಸ್ತುತ ನೂರಕ್ಕೂ ಹೆಚ್ಚಿನ ಮಹಿಳೆಯರು ಸಫಲಂ ಘಟಕದ ಮೂಲಕ ದುಡಿಮೆ ಗಿಟ್ಟಿಸಿಕೊಂಡಿದ್ದಾರೆ. ಆರಂಭದಲ್ಲಿ ಓರ್ವರಿಗೆ 80 ರೂ. ದಿನವೇತನವಿತ್ತು, ಪ್ರಸ್ತುತ ಒಬ್ಬರಿಗೆ 350 ರೂ. ದಿನ ವೇತನವಿದೆ. ಸಫಲಂನ ಗೇರು ಬೀಜ ಸಂರಕ್ಷಣೆಯ ಒಟ್ಟು 11 ಘಟಕಗಳು ಜಿಲ್ಲೆಯಲ್ಲಿವೆ. ಅಜಾನೂರ್, ಬೇಡಡ್ಕ, ಎಣ್ಮಕಜೆ, ಕಳ್ಳಾರ್, ಕಾರಡ್ಕ, ಕಯ್ಯೂರು-ಚೀಮೇನಿ, ಕೋಡಂ-ಬೆಳ್ಳೂರು, ಕುತ್ತಿಕ್ಕೋಲ್, ಪನತ್ತಡಿ, ಪಳ್ಳಿಕೆರೆ, ಚೆಮ್ನಾಡ್ ಎಂಬೆಡೆಗಳಲ್ಲಿ ಗೇರು ಬೀಜ ಸಂಸ್ಕರಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿನ ಗೇರನ್ನು ಕೊಂಡು, ಶೇಖರಿಸಿ, ನಂತರ ಸಂಸ್ಕರಣಾ ಘಟಕಗಳ ಮೂಲಕ ಸೇವನೆಗೆ ಯೋಗ್ಯವಾಗಿಸಲಾಗುತ್ತದೆ. ಸಫಲಂ ಗೇರು ಬೀಜವು ಪರಂಕಿ ನಟ್ಸ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತದೆ. ಈ ಗೇರು ಬೀಜ ಪೊಟ್ಟಣಗಳಿಗೆ ಉತ್ತಮ ಮಾರುಕಟ್ಟೆ ಇದ್ದು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. 2019 ರಲ್ಲಿ ಸಫಲಂ ಘಟಕಕ್ಕೆ ಹತ್ತು ವರ್ಷ ತುಂಬುತ್ತಿದೆ. ಹತ್ತು ವರ್ಷಗಳಲ್ಲಿ ದೆಹಲಿಯಲ್ಲಿ ನಡೆದ ಆಹಾರ ಭಕ್ಷ್ಯ ಮೇಳವಾದ ಆಜೀವಿಕ ಮೇಳ, ಸರಸ್ ಮೇಳ, ಬೆಂಗಳೂರು ಫೆಸ್ಟ್ ಸೇರಿದಂತೆ ದೇಶ ಮತ್ತು ವಿವಿಧ ರಾಜ್ಯಗಳ ಆಹಾರ ಮೇಳಗಳಲ್ಲಿ ಸಫಲಂ ಸದಸ್ಯರು ತಮ್ಮ ಬ್ರಾಂಡ್ ಪ್ರದರ್ಶಿಸಿದ್ದು, ಉತ್ತಮ ಘಟಕವೆಂಬ ಹೆಸರು ಪಡೆದಿದೆ. ಇಡುಕ್ಕಿ ಜಿಲ್ಲೆಯ ಕುಟುಂಬಶ್ರೀ ಮೇಳದಲ್ಲೂ ಜಿಲ್ಲೆಯ ಸಫಲಂ ಭಾಗವಹಿಸಿ ಪ್ರಶಂಸೆಗೆ ಪಾತ್ರವಾಗಿದೆ. ಉತ್ತಮ ಉದ್ಯಮಶೀಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಫಲಂ ಮಹಿಳಾ ಗೇರು ಬೀಜ ಸಂಸ್ಕರಣಾ ಘಟಕ ಉಳಿದ ಜಿಲ್ಲೆಗಳಿಗೊಂದು ಮಾದರಿಯಾಗಿದೆ.


