ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲೋಕಾರ್ಪಣೆ ಮೊದಲ ಹಾರಾಟ ನಡೆಸಿದ ಕಣ್ಣೂರು ಅಬುದಾವಿ ಏರ್ ಇಂಡಿಯಾ ಎಕ್ಸ್‍ಪ್ರೆಸ್
0
ಡಿಸೆಂಬರ್ 09, 2018
ಕಣ್ಣೂರು: ಬಹುನಿರೀಕ್ಷಿತ ಕಣ್ಣೂರು ವಿಮಾನ ನಿಲ್ದಾಣವು ರಾಷ್ಟ್ರಕ್ಕೇ ಮಾದರಿ ನಿಲ್ದಾಣವಾಗಿ ರೂಪುಗೊಂಡಿದೆ. ಈ ನಿಟ್ಟಿನಲ್ಲಿ ಕೇರಳ ರಾಜ್ಯ ಸರಕಾರದ ದಿಟ್ಟ ಸ್ಪಷ್ಟ ನಡೆ ಅಭಿನಂದನಾರ್ಹ ಎಂದು ಕೇಂದ್ರ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ತಿಳಿಸಿದರು.
ದಶಕಗಳ ಹಿಂದೆ ಯೋಜನೆ ರೂಪಿಸಿ ಬಳಿಕ ನೆನೆಗುದಿಗೆ ಬಿದ್ದು, ಇದೀಗ ತಲೆಯೆತ್ತಿರುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದು ಬೆಳಿಗ್ಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಿಮಾನ ಯಾನ ಮತ್ತು ರಾಷ್ಟ್ರದಭಿವೃದ್ದಿಗೆಈದಿನ ಮಹತ್ತರ ದಿನವಾಗಿ ದಾಖಲಾಗಬೇಕಿದೆ. ಅಭಿವೃದ್ದಿಗೆಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಾಗಿದೆ ಎಂದು ಸಚಿವರು ಶ್ಲಾಘಿಸಿದರು. ರಾಷ್ಟ್ರದಲ್ಲಿ ಅಭಿವೃದ್ದಿ ಚಟುವಟಿಕೆಯ ದೃಷ್ಟಿಯಲ್ಲಿ ಕೇರಳ ರಾಜ್ಯವು ಬಹಳಷ್ಟು ಸಾಧಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಸಾಕಾರಗೊಂಡಿರುವ ವಿಮಾನ ನಿಲ್ದಾಣ ಯೋಜನೆ ಹೊಸ ರಾಜ್ಯಕ್ಕೆ ಹೊಸ ದಿಶೆಯನ್ನು ತೋರಿಸಿದೆ ಎಂದು ಸಚಿವರು ತಿಳಿಸಿದರು.
ರಾಷ್ಟ್ರದಲ್ಲೇ ನಾಲ್ಕು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿರುವ ಏಕೈಕ ರಾಜ್ಯವಾಗಿ ಕೇರಳ ಈ ಮೂಲಕ ಹೊಸ ದಾಖಲೆ ಬರೆದಿದೆ. ವಿದೇಶಿ ಪ್ರವಾಸಿಗಳು, ಪ್ರವಾಸೋದ್ಯಮ ಮೊದಲಾದ ಅಭಿವೃದ್ದಿ ಚಟುವಟಿಕೆಗಳ ಸಾಕಾರಕ್ಕೆ ನೂತನ ವಿಮಾನ ನಿಲ್ದಾಣದ ಮೂಲಕ ವ್ಯಾಪಕ ಅವಕಾಶಗಳು ಕೇರಳದ ಮುಂದಿದೆ. ಇವುಗಳ ಸಕಾರಾತ್ಮಕ ಅಂಶಗಳನ್ನು ಬಳಸಿ ಕೇರಳ ಹಾಗೂ ಕೇಂದ್ರ ಸರಕಾರಗಳು ಜೊತೆಯಾಗಿ ಹಮ್ಮಿಕೊಂಡ ಈ ಯೋಜನೆಯ ಯಶಸ್ಸು ಮುಂದಿನ ದಿನಗಳಲ್ಲಿ ಫಲ ನೀಡಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕೇಂದ್ರ ಸಚಿವ ಸುರೇಶ್ ಪ್ರಭು ಜಂಟಿಯಾಗಿ ಟರ್ಮಿನಲ್ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಇಬ್ಬರೂ ಮೊದಲ ಅಂತರಾಷ್ಟೀಯ ಯಾನ ಕೈಗೊಳ್ಳುವ ಕಣ್ಣೂರು- ಅಬುದಾಬಿ ಏರ್ ಇಂಡಿಯಾ ವಿಮಾನಕ್ಕೆ ಧ್ವಜ ಬೀಸಿ ಉದ್ಘಾಟಿಸಿದರು. 185 ಮಂದಿ ಪ್ರಯಾಣಿಕರು ಕಣ್ಣೂರು-ಅಬುದಾಬಿ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನದಲ್ಲಿ ತೆರಳುವ ಮೂಲಕ ರೋಮಾಂಚನಗೊಳಿಸಿದರು.
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಸುಧೀರ್ಘ ಕಾಲಾವಧಿಯ ಕನಸಿನ ಕೂಸಾದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜನಪ್ರತಿನಿಧಿಗಳ, ಅಧಿಕಾರಿಗಳ ಮೇಲಾಟಗಳಿಂದ ತಡವಾಗಿ ಸೇವೆಗೆ ಲಭ್ಯವಾಗುತ್ತಿರುವುದು ದೌರ್ಭಾಗ್ಯಕರ. 1996ರಲ್ಲೇ ಯೋಜನೆ ರೂಪಿಸಿದ್ದ ಇಲ್ಲಿಯ ನಿಲ್ದಾಣದ ಕಾಮಗಾರಿಯನ್ನು ಈಗಷ್ಟೇ ಪೂರ್ತಿಗೊಳಿಸಲಾಗಿರುವುದು ಸಂತೋಷ ನೀಡಿದೆ. ಜನನಾಯಕರು ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ವಿಳಂಬ ನೀತಿ ಅನುಸರಿಸುವುದನ್ನು ಈಗಿನ ರಾಜ್ಯ ಸರಕಾರ ಸಹಿಸುವುದಿಲ್ಲ ಎಂದು ತಿಳಿಸಿದರು.
ಸಮಾರಂಭದ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೊತೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಣ್ಣೂರಿನಿಂದ ವಿಮಾನ ನಿಲ್ದಾಣಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಯುಡಿಎಫ್ ಪ್ರತಿನಿಧಿಗಳು ಸಮಾರಂಭ ಬಹಿಷ್ಕರಿಸಿದರು.





