ಮಂಜೇಶ್ವರ: ಮಂಗಳೂರಿನಲ್ಲಿ ನಡೆದ ಸಹಪಂಕ್ತಿ ಭೋಜನದ 180ನೇ ವರ್ಷಾಚರಣೆ ಅಂಗವಾಗಿ ವಿಚಾರಸಂಕಿರಣ ಮತ್ತು ಸಹಪಂಕ್ತಿ ಭೋಜನ ಮಂಜೇಶ್ವರ ಗೋವಿಂದ ಪೈ ಅವರ ನಿವಾಸ ಗಿಳಿವಿಂಡುವಿನಲ್ಲಿ ಮಂಗಳವಾರ ನಡೆಯಿತು.
1839ರಲ್ಲಿ ಮಂಗಳೂರಿನಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ತಾತ ಸಾಹುಕಾರ್ ನಾರಾಯಣ ಪೈ ಅವರು ನಡೆಸಿದ್ದ ಸಹಸ್ರ ಭೋಜನ(ಸಹಪಂಕ್ತಿ ಭೋಜನ)ದ 180ನೇ ವರ್ಷದ ಸ್ಮರಣಾರ್ಥ ಈ ಸಮಾರಂಭ ನಡೆಯಿತು.
ರಾಜ್ಯ ಸರಕಾರದ ಒಂದು ಸಾವಿರ ದಿನ ಪೂರೈಕೆ ಅಂಗವಾಗಿ ಜಿಲ್ಲಾ ಮಟ್ಟದ ಸರಣಿಕಾರ್ಯಕ್ರಮಗಳ ಸಲುವಾಗಿ ಕೇರಳ ಸಂಸ್ಕೃತಿ ಇಲಾಖೆ,ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಜಂಟಿ ವತಿಯಿಂದ ಸಮಾರಂಭ ನಡೆಯಿತು.
ಮಂಜೇಶ್ವರ ತಹಸೀಲ್ದಾರ್ ಜಾನ್ ವರ್ಗೀಸ್ ಪಿ. ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಾಲಕ್ಕೆ ಮುನ್ನವೇ ಸಂಚರಿಸಿದ್ದ ವ್ಯಕ್ತಿಗಳ ಸಮಾಜದ ಪಿಡುಗುಗಳ ವಿರುದ್ಧ ಧ್ವನಿ ಏರಿದ್ದು, ಇಡೀ ಜನತೆಗೆ ಬೆಳಕು ಲಭಿಸುವಂತಾಗಿದೆ. ಈ ನಿಟ್ಟಿನಲ್ಲಿ ಸಾಹುಕಾರ್ ನಾರಾಯಣ ಪೈಗಳಿಂದ ಮಂಜೇಶ್ವರ ಗೋವಿಂದ ಪೈ ಅವರ ವರೆಗಿನ ಸಾಧಕರ ಕೊಡುಗೆ ಅನನ್ಯ ಎಂದು ತಿಳಿಸಿದರು.

ಸಹಪಂಕ್ತಿ ಭೋಜನ ಮನುಷ್ಯತ್ವವನ್ನು ಸಾರಿದ ಸಂಕೇತವಾಗಿತ್ತು. ಭಾರತದ ಅಖಂಡತೆ ಕಾಯ್ದುಕೊಳ್ಳುವಲ್ಲಿ ಕಾವ್ಯಧಾರೆ ಹರಿಸಿದ್ದ ಗೋವಿಂದ ಪೈ ಅವರ ನಿವಾಸವೇ ಒಂದು ಅಶ್ರಮವಾಗಿತ್ತು ಎಂದರು.
ಸಮಾರಮಭದ ಅಧ್ಯಕ್ಷತೆಯನ್ನು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ ವಹಿಸಿದ್ದರು. ಬೆಳ್ತಂಗಡಿ ಸರಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ ಕೆ. ಮತ್ತು ಹಿರಿಯಿತಿಹಾಸ ಕಾರ , ನಿವೃತ್ತ ಉಪನ್ಯಾಸಕ ಡಾ.ಸಿ.ಬಾಲನ್ ಮಂಗಳೂರು ಸಹಪಂಕ್ತಿ ಭೋಜನ ಸಂಬಂಧ ಉಪನ್ಯಾಸ ನಡೆಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಮಂಜೇಶ್ವರ ತಾಲೂಕು ನಾಗರೀಕಪೂರೈಕೆ ಅಧಿಕಾರಿ ಎ.ಅಬ್ದುಲ್ ಜಬ್ಬಾರ್ ಮುಖ್ಯ ಅತಿಥಿಗಳಾಗಿದ್ದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಆಡಳಿತಾಧಿಕಾರಿ ಡಾ.ಕೆ.ಕಮಲಾಕ್ಷ ಸ್ವಾಗತಿಸಿದರು. ಕೇರಳ ತುಳು ಅಕಾಡೆಮಿ ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು.