ಪುಸ್ತಕ : ಗಡಿನಾಡ ಕಾವ್ಯ ಕೈರಳಿ (ಆಯ್ದ ಕವನಗಳ ಸಂಕಲನ)
ಸಂಪಾದಕ ಮಂಡಳಿ:
ಕೆ.ಎಸ್ ಶ್ರೀಕಾಂತ್ ನೆಟ್ಟಣಿಗೆ
ಅಖಿಲೇಶ್ ನಗುಮೊಗಂ
ವಿದ್ಯಾ ಗಣೇಶ್ ಸಂಧ್ಯಾಗೀತಾ ಬಾಯಾರ್
ವಿಮರ್ಶಾ ಬರಹ: ಚೇತನಾ ಕುಂಬಳೆ.
*ಭಾವಲೋಕದ ಕದ ತಟ್ಟಿದಾಗ*
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಗಡಿನಾಡ ಸಾಹಿತ್ಯ ಸಂಸ್ಕೃತಿ ಅಕಾಡಮಿ ವತಿಯಿಂದ ಶ್ರೇಕ್ಷೇತ್ರ ಕೊಂಡೆವೂರಿನಲ್ಲಿ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಡಿಸಂಬರ್ ತಿಂಗಳಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ವಾಚಿಸಲ್ಪಟ್ಟ ಕವನಗಳ ಸಂಗ್ರಹವೇ ಈ *ಗಡಿನಾಡ ಕಾವ್ಯ ಕೈರಳಿ* . ಬಹುಭಾಷಾ ಸಂಗಮ ಭೂಮಿಯಾದ ಕಾಸರಗೋಡಿನ ಸ್ಪೀಡ್ ವೇ ಸಭಾಂಗಣದಲ್ಲಿ 9/2/19ರಂದು ಕೈರಳಿ ಪ್ರಕಾಶನದಿಂದ ಈ ಕೃತಿ ಬಿಡುಗಡೆಗೊಂಡಿತು. ಈ ಸಂಕಲನಕ್ಕೆ ಸೂಕ್ತವಾದ ಹೆಸರನ್ನು ಸೂಚಿಸಿದವರು ನಮ್ಮ ನಾಡಿನ ಹಿರಿಯ ಪತ್ರಕರ್ತ, ಕವಿ ಎಲ್ಲರ ಪ್ರೀತಿಯ ರಾಧಾಕೃಷ್ಣ ಉಳಿಯತ್ತಡ್ಕ. ಪತ್ರಕರ್ತರಾದ ಅಖಿಲೇಶ್ ನಗುಮೊಗಂ ಅವರು ಅಂದದ ಮುಖಪುಟ ವಿನ್ಯಾಸವನ್ನು ಮಾಡಿದ್ದಾರೆ.

ಈ ಸಂಕಲನದ ಆರಂಭದಲ್ಲಿ , "ಪ್ರಕೃತ ಪ್ರಕೃತಿಯಲ್ಲಿ ಕಾಣುವ ಅಥವಾ ದೈನಂದಿನ ಜೀವನದಲ್ಲಿ ತನ್ನ ಭಾವನೆಗಳಿಗೆ, ಬಂದ ಕಲ್ಪನೆಗಳಿಗೆ ಅಕ್ಷರ ರೂಪವಿರಿಸಿ ಶಬ್ಧಗಳಾಗಿಸಿ ಕಾವ್ಯ ಸೃಷ್ಟಿಯಾಗಿ ಅದನ್ನೊಂದು ಸಂಗ್ರಹಯೋಗ್ಯವನ್ನಾಗಿಸಿದರೆ ಮಾತ್ರ ಅದರ ಉಳಿವು ಸಾಧ್ಯ " ಎಂದು ಹೇಳುತ್ತಾ, ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಆಶೀರ್ವಚನ ನೀಡಿ ಹರಸಿದ್ಧಾರೆ. ಹರಿಕಥಾ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಿರುವ ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಅವರು 'ತಮ್ಮ ನಲ್ನುಡಿ'ಯಲ್ಲಿ ಕನ್ನಡ ಕೈರಳಿಯ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸುತ್ತಾ, "ಈ ಒಂದು ಸಮಾಜಕಾರ್ಯ ಉತ್ತಮ ಸಂಸ್ಕೃತಿಯೊಂದಿಗೆ ಬೆಳಗಿ ಕವಿ ಹೃದಯದ ಆಶಯಗಳು ಓದುಗರನ್ನು ಮುಟ್ಟಿ ಎಲ್ಲೆಲ್ಲೂ ಪ್ರತಿಭೆ ಬೆಳೆದು ಕನ್ನಡಿಗರ ಕೈರಳಿ ಎಲ್ಲರ ಕೈ ಸೇರಿ ಕಹಳೆ ಮೊಳಗಿಸುವಂತಾಗಲಿ" ಎಂದು ಶುಭ ಹಾರೈಸುತ್ತಾರೆ. ಬಹುಭಾಷಾ ಕವಿಗೋಷ್ಠಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ಕವಿ ಭಾವಗಳಿಗೆ ಸ್ಪಂದಿಸಿದ ರಾಧಾಕೃಷ್ಣ ಉಳಿಯತ್ತಡ್ಕರ ಅಧ್ಯಕ್ಷೀಯ ನುಡಿಗಳನ್ನೇ ಇಲ್ಲಿ ಮುನ್ನುಡಿಯಾಗಿ ನೀಡಿದ್ದಾರೆ. " ಕವಿತೆ ಕಟ್ಟುವ ಕ್ರಿಯೆಯಲ್ಲ, ಸಹಜವಾಗಿ ಹುಟ್ಟುವ ಕ್ರಿಯೆ. ಅದು ಕವಿಯ ಒಳಗಿನ ತಲ್ಲಣದ, ವಿಷಣ್ಣತೆಯ, ಒಳತೋಟಿಯ, ಮೂರ್ತಸ್ವರೂಪ. ಭಾಷೆಯ ಮೂಲಕ ಸಮಾಜದ ಜತೆಗೆ ಮಾಡುವ ಸಂವಹನ. ಧ್ವನಿಸುವಿಕೆ ಕಾವ್ಯದ ಶ್ರೇಷ್ಠ ಗುಣವಾದರೂ ಅರ್ಥ ಮತ್ತು ನಾದ ಸೇರಿ ಕವಿಯ ಸ್ವಾನುಭವಕ್ಕೆ ತಕ್ಕ ವಿಶಿಷ್ಟ ಅಭಿವ್ಯಕ್ತಿಯನ್ನು ಸಾಧಿಸಿದರೆ ಅದು ಸಫಲ ಕವನವಾಗುತ್ತದೆ. ಬದುಕು ಬೇರೆ ಅಲ್ಲ, ಕವಿತೆ ಬೇರೆ ಅಲ್ಲ. ಕವಿತೆ ಬದುಕಿನಿಂದಲೇ ಹುಟ್ಟುತ್ತದೆ. ಕವಿಯ ಅಧ್ಯಯನ ಅನುಭವದಲ್ಲಿ ಗಟ್ಟಿಯಾಗುತ್ತದೆ." ಎಂದು ಮನ ಮುಟ್ಟುತ್ತವೆ, ತಟ್ಟುತ್ತವೆ. ಇಂತಹ ಹೃದಯಸ್ಪರ್ಶಿ ಮಾತುಗಳು ಮತ್ತೆ ಮತ್ತೆ ಕಾಡುತ್ತವೆ. ಕೊನೆಗೆ
*ಹಸಿದ ಒಡಲೊಳಗೆ'*
"ತುತ್ತು ನೀಡುವ ಕವಿತೆಗಳು ಬರಲಿ
ಬಂಜರು ನೆಲ ಜಲ ಹೀರಿಕೊಳ್ಳಲಿ..." ಎಂಬ ಅದ್ಭುತ ಕವನವನ್ನು ನಮ್ಮ ಮುಂದೆ ತೆರೆದಿಡುತ್ತಾರೆ. ಮುಂದೆ ಪ್ರಕಾಶಕರಾದ ಎ ಆರ್ ಸುಬ್ಬಯ್ಯಕಟ್ಟೆಯವರ ಮನದ ಮಾತುಗಳಿಂದ ಇದರ ಧ್ಯೇಯೋದ್ದೇಶಗಳನ್ನು ತಿಳಿಯಡಹುದು. ಜಾನಪದ ಕ್ರೀಡಾ ಸಂಶೋಧಕರೂ ಅಂಕಣಕಾರರೂ ಆದ ಮಂಗಳೂರಿನ ಎಸ್ ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರು ಈ ಸಂಕಲನಕ್ಕೆ ಬೆನ್ನುಡಿ ಬರೆಯುವ ಮೂಲಕ ಪ್ರೋತ್ಸಾಹವನ್ನು ನೀಡಿದ್ದಾರೆ.
ಈ ಕವನ ಸಂಕಲನದಲ್ಲಿ ಒಟ್ಟು 46 ಕವಿಗಳ ಕವನಗಳಿವೆ. ಅವುಗಳಲ್ಲಿ ಕನ್ನಡ ತುಳು ಮಲಯಾಳ ಹೀಗೆ ಹಲವು ಭಾಷೆಗಳ ಕವನಗಳು ಮೇಳೈಸಿವೆ ಇಲ್ಲಿ ವಯಸ್ಸಿನ ಮಿತಿಯಿಲ್ಲದೆ ಮಕ್ಕಳಿಂದ ಹಿಡಿದು ಹಿರಿಯರ ವರೆಗಿನ ಎಲ್ಲರ ಕವಿತೆಗಳೂ ಇವೆ. ಕವಿತೆ, ಕಥನಕವನ ಚುಟುಕು ಹನಿಗವನಗಳೊಂದಿಗೆ ಗಜಲ್ ಪ್ರಕಾರವೂ ಸೇರಿಕೊಂಡಿರುವುದು ಗಮನಾರ್ಹ. ಇಲ್ಲಿ ಕಾಸರಗೋಡಿನ ಕವಿಗಳೊಂದಿಗೆ ಹೊರ ರಾಜ್ಯದ ಕವಿಗಳ ಕವನಗಳನ್ನೂ ಇಲ್ಲಿ ಕಾಣಬಹುದು.
ಹಿರಿಯ ಕವಿ, ಪತ್ರಕರ್ತರಾದ ಮಲಾರ್ ಜಯರಾಮ ರೈ ಅವರ ಕವಿತೆಯೊಂದಿಗೆ ಭಾವಲೋಕದ ಕದವು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.
ಅವರ 'ಸತ್ಯದಪ್ಪೆ ಕಣ್ಣ್ ಕೊರು' ಎಂಬ ತುಳು ಕವಿತೆಯಲ್ಲಿ ತುಳು ಮಣ್ಣಿನ ಸತ್ಯವನ್ನು ನೋಡುವ, ಅದರ ಸೌಂದರ್ಯವನ್ನು ಸವಿಯಲು, ತುಳು ಬದುಕಿನ ಹಿರಿಮೆಯನ್ನು ನೋಡಲು ಕಣ್ಣು ಕೊಡು ಎಂದು ಕೇಳುವುದರೊಡನೆ ಈ ಭೂಮಿಯಲ್ಲಿ ಒಳ್ಳೆ ರೀತಿಯಲ್ಲಿ ಬದುಕಲು ಸದ್ಬುದ್ಧಿಯನ್ನು ನೀಡು ಎಂದು ಮುಕ್ತ ಮನದಿಂದ ಕೇಳಿಕೊಳ್ಳುವುದನ್ನು ನೋಡಬಹುದು.

ಪ್ರಭಾಕರ ಕಲ್ಲೂರಾಯ ಅವರ 'ಲೋಕಜೀವಿ' ಕವಿತೆಯಲ್ಲಿ
"ಸಮಾನ ಜನರು ಒಡಕನು ಹುಟ್ಟಿಸಿ
ದ್ವೇಷ ಮತ್ಸರ ಏಕಾಯಿತು- ಜಾತಿ ಮತಗಳ ಅಂತರದಿಂದ ಶಾಂತಿಭಂಗ ಯಾಕಾಯಿತು" ಎಂಬ ಗಂಭೀರ ಪ್ರಶ್ನೆಯೊಂದನ್ನು ಎತ್ತಿರುವುದನ್ನು ಕಾಣಬಹುದು.
ಹ.ಸು.ಒಡ್ಡಂಬೆಟ್ಟು ಅವರ 'ಇಲ್ಲಿ ಹೋರಾಡುತ್ತಿದ್ದಾರೆ' ಕವನದಲ್ಲಿ ಹೋರಾಡಲು ಕಾರಣವನ್ನು ತಿಳಿಸುತ್ತಾ, ಪ್ರೀತಿ, ವಾತ್ಸಲ್ಯ, ಸ್ನೇಹದಿಂದ ತಮ್ಮವರ ಜೊತೆ ನೆಮ್ಮದಿಯಿಂದ ಬದುಕಲು ಬಿಡಿ ಎಂದು ವಿನಂತಿಸಿಕೊಳ್ಳುವುದನ್ನು ನೋಡಬಹುದು.
ಇಲ್ಲಿನ ಕವಿತೆಗಳಲ್ಲಿ ತುಳುನಾಡು, ಭಾಷೆ, ಜೀವನದ ಬಗೆಗಿನ ಪ್ರೀತಿಯಿದೆ. ಹಾಗೆಯೇ ಕನ್ನಡ ನಾಡು ನುಡಿ ಕನ್ನಡಾಂಬೆಯ ಬಗೆಗಿನ ಒಲವು, ಅಭಿಮಾನಗಳಿವೆ. ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿಗತಿ,ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳು ಬಿತ್ತರಗೊಂಡಿವೆ. ಮಳೆಯ ರೌದ್ರರೂಪದ ದರ್ಶನವಿದೆ, ಶಾಂತಿ ಸಂದೇಶ ಸಾರುವ ಕವಿತೆಗಳಿವೆ. ತಾಯಿ ಮಗಳಿಗೆ ಹೇಳುವಂತ ಮಾತುಗಳಿವೆ., ಅಣ್ಣನಿಗೆ ತಂಗಿಯ ಮೇಲಿನ ಕಾಳಜಿಯಿದೆ,ಹೂಗಳ ಚೆಲುವಿದೆ, ಸ್ವಗತಗಳಿವೆ. ಕ್ಷಣಕ್ಷಣಕೂ ಬೆರಗು ಮೂಡಿಸುವ ಕಡಲಿನ ವೈಭವವಿದೆ. ಮಗನ ಆಗಮನದ ನಿರೀಕ್ಷೆಯಲ್ಲಿ ಅಜ್ಜಿ ಕಾಣುವ ಕನಸುಗಳಿವೆ. ತೈಲದಿಂದಲೇ ಉಸಿರಾಡುವ ದೀಪದ ಬದುಕಿನ ಚಿತ್ರಣವಿದೆ. ಕಾಂಕ್ರೀಟ್ ನ ಸಂಸ್ಕೃತಿಯಿಂದಾಗಿ ಹಸಿರಿನ ನಾಶವಾಗುವುದನ್ನು ಹೇಳುತ್ತವೆ. ಮಂಜಾನೆಯ ವರ್ಣನೆಯಿದೆ. ಒಂದಷ್ಟು ಮೂಢನಂಬಿಕೆಗಳಿವೆ.
ಒಟ್ಟಾರೆಯಾಗಿ ಇಲ್ಲಿ ಒಂದಷ್ಟು ಕುಟುಕುವ ಚುಟುಕುಗಳಿವೆ, ಹೊಳೆಯುವ ಹನಿಗಳಿವೆ, ಮನ ತಟ್ಟುವ ಕವಿತೆಗಳಿವೆ. ಕುತೂಹಲ ಮೂಡಿಸುವ ಗಜಲ್ ಇದೆ.
ಚೇತನಾ ಕುಂಬ್ಳೆ

ಫೀಡ್ ಬ್ಯಾಕ್:samarasasudhi@gmail.com