ಕನ್ನಡದ ಮಡಿಲಲ್ಲಿ ಅಮ್ಮ ಮಗಳಿಗೆ ವಿಶೇಷ ಅಭಿನಂದನೆ-ಅಂತರಾಷ್ಟ್ರೀಯ ಯೋಗ ಪ್ರತಿಭೆಗೆ ಗೌರವಾಭಿನಂದನೆ
0
ಮಾರ್ಚ್ 18, 2019
ಬದಿಯಡ್ಕ: ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ಭಾನುವಾರ ಸಂಜೆ ಕಾಸರಗೊಡಿನ ಮೀಡಿಯಾ ಕ್ಲಾಸಿಕಲ್ಸ್ ಆಯೋಜಿಸಿದ್ದ ಕನ್ನಡದ ಮಡಿಲು ವಿಶೇಷ ಕಾರ್ಯಕ್ರಮದಲ್ಲಿ ಯೋಗ ಪ್ರತಿಭೆ ತೇಜಕುಮಾರಿ ಹಾಗೂ ಮಗಳು ಅಭಿಜ್ಞಾ ಹರೀಶ್ ಕರಂದಕ್ಕಾಡು ಇವರನ್ನು ಮೀಡಿಯಾ ಕ್ಲಾಸಿಕಲ್ಸ್ ಅಧ್ಯಕ್ಷ ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ ಅವರ ಅಧ್ಯಕ್ಷತೆಯಲ್ಲಿ ಗೌರವಿಸಲಾಯಿತು.
ಅಮ್ಮನ ಮಡಿಲಲ್ಲಿ ಮಗಳನ್ನು ಕುಳ್ಳಿರಿಸಿ ವಿಶೇಷವಾಗಿ ಅಭಿನಂದನೆಯನ್ನು ಸ್ವೀಕರಿಸಿದರು. ಇವರು ಇತ್ತೀಚೆಗೆ ಪಾಂಡಿಚ್ಚೇರಿಯಲ್ಲಿ ನಡೆದ ರಾಷ್ಟ್ರಮಟ್ಟದ ಯೋಗಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದು ಮುಂದಿನ ತಿಂಗಳು ಮಲೇಶ್ಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ವೇದಿಕೆಯಲ್ಲಿ ಕ.ಸಾ.ಪ.ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ಹಿರಿಯ ಸಾಹಿತಿ ಹರೀಶ್ ಪೆರ್ಲ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಮುಳ್ಳೇರಿಯ, ಉದ್ಯಮಿ ಗಣೇಶ್ ಅಣಂಗೂರು, ಮೀಡಿಯಾ ಕ್ಲಾಸಿಕಲ್ಸ್ ಸ್ಥಾಪಕಾಧ್ಯಕ್ಷ ಅಖಿಲೇಶ್ ನಗುಮುಗಂ, ಕಾರ್ಯದರ್ಶಿ ಬಾಲಕೃಷ್ಣ ಅಚ್ಚಾಯಿ ಉಪಸ್ಥಿತರಿದ್ದರು.

