ಪ್ರಜಾಪ್ರಭುತ್ವದ ಮಹಾ ಹಬ್ಬ : ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ
0
ಮಾರ್ಚ್ 11, 2019
ನವದೆಹಲಿ: 2019 ಪ್ರಜಾಪ್ರಭುತ್ವದ ಮಹಾಹಬ್ಬಕ್ಕೆ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ.
ನಾವು ಬೇರೆ ಬೇರೆ ರಾಜಕೀಯ ಪಕ್ಷಗಳಿಗೂ ಸೇರಿದ್ದರೂ ಭಾರತದ ಅಭಿವೃದ್ಧಿ ಹಾಗೂ ಪ್ರತಿಯೊಬ್ಬ ಭಾರತೀಯರ ಬಲವರ್ಧನೆ ನಮ್ಮ ಗುರಿಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಚುನಾವಣಾ ಆಯೋಗ, ಅದರ ಎಲ್ಲಾ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗಳಿಗೂ ಶುಭ ಕೋರುವುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಅನೇಕ ವರ್ಷಗಳಿಂದ ಚುನಾವಣಾ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವ ಚುನಾವಣಾ ಆಯೋಗದ ಕಾರ್ಯಗಳಿಂದ ಭಾರತಕ್ಕೆ ಹೆಮ್ಮೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
2014ರಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಯುಪಿಎ ಅನ್ನು ಜನರು ತಿರಸ್ಕರಿಸಿದ್ದರು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 130 ಕೋಟಿ ಭಾರತೀಯರ ಆಶೀರ್ವಾದದಿಂದ ಹಿಂದೆ ಮಾಡಲಾಗದಿದ್ದನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
2019 ಚುನಾವಣೆಯೊಂದಿಗೆ ಸಕಾರಾತ್ಮಕ ಹಾಗೂ ಭರವಸೆಯ ಸ್ಪೂರ್ತಿಯೊಂದಿಗೆ ಜನರ ಆಕಾಂಕ್ಷೆಗಳನ್ನು ಪೂರ್ಣಗೊಳಿಸೋಣ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.




