HEALTH TIPS

ತಮ್ಮ ವೈಫಲ್ಯ ಮರೆಮಾಚಲು ಮೋದಿಯಿಂದ ರಾಷ್ಟ್ರೀಯ ಭದ್ರತೆ ದುರ್ಬಳಕೆ: ಸಿಡಬ್ಲ್ಯುಸಿ

ಅಹಮದಾಬಾದ್: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ವಿಭಾಗಗಳಲ್ಲಿಯೂ ವಿಫಲವಾಗಿದ್ದು, ಬಿಜೆಪಿಯ ಜನವಿರೋಧಿ ನೀತಿ ಬಹಿರಂಗಗೊಳಿಸಲು ಎಲ್ಲ ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಶಕ್ತಿಗಳು ಒಂದಾಗಿ ಹೋರಾಟ ನಡೆಸಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಮಂಗಳವಾರ ಕರೆ ನೀಡಿದೆ. ಮಂಗಳವಾರ ಮೋದಿ ಅವರ ತವರು ರಾಜ್ಯ ಗುಜರಾತ್‍ನಲ್ಲಿ ನಡೆದ ತನ್ನ ರಾಷ್ಟ್ರಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ವಿರುದ್ಧ ನಿರ್ಣಯಗಳನ್ನು ತೆಗೆದುಕೊಂಡಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿಯಂತಹ ಹೊರೆಯನ್ನು ಜನತೆಯ ಮೇಲೆ ಹೊರಿಸಿರುವ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದೆ. ಪ್ರಧಾನಿ ಮೋದಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ರಾಷ್ಟ್ರೀಯ ಭದ್ರತಾ ವಿಷಯಗಳನ್ನು ರಾಜಕೀಯದಲ್ಲಿ ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿದ್ದು, ಪ್ರಜಾಪ್ರಭುತ್ವದ ಒಕ್ಕೂಟಗಳು ರಾಷ್ಟ್ರದ ರಾಜಕಾರಣವನ್ನು ನೈಜತೆಯಿಂದ ದೂರವಿಡಲು ಬಿಡಬಾರದು ಎಂಬ ನಿರ್ಣಯ ಕೈಗೊಂಡಿದೆ. ಪುಲ್ವಾಮ ಉಗ್ರರ ದಾಳಿಯನ್ನು ಖಂಡಿಸಿ, ಭಾರತೀಯ ಸೈನಿಕರು ಮತ್ತು ಸಶಸ್ತ್ರ ಪಡೆಗಳಿಗೆ ತನ್ನ ಬೆಂಬಲ ಸೂಚಿಸಿದೆ. ಎದುರಾಳಿಗೆ ದಿಟ್ಟ ಉತ್ತರ ನೀಡುವ ಮೂಲಕ ಭಾರತ ಒಗ್ಗಟ್ಟಿನಿಂದ ಇದೆ ಎಂಬ ಸಂದೇಶವನ್ನು ನೀಡಿರುವ ಸೇನೆಯ ಕ್ರಮವನ್ನು ಸಮಿತಿ ಶ್ಲಾಘಿಸಿದೆ. ಪುಲ್ವಾಮ ದಾಳಿ ವೇಳೆ ಬೇರೆ, ಬೇರೆ ರಾಜಕೀಯ ಪಕ್ಷಗಳ ದೃಷ್ಟಿಕೋನವನ್ನು ಉಲ್ಲೇಖಿಸಿ, ಅವುಗಳೆಲ್ಲ ದೇಶದ ಆಂತರಿಕ ರಾಜಕೀಯ ನಿಲುವುಗಳು. ಚುನಾವಣೆ ವೇಳೆ ವಿಶೇಷವಾಗಿ ರಾಜಕೀಯ ಸಿದ್ದಾಂತಗಳು ಭಿನ್ನವಾಗಿರುತ್ತವೆ. ಅದನ್ನು ದೇಶದ ದುರ್ಬಲತೆ ಅಥವಾ ಭಿನ್ನಾಭಿಪ್ರಾಯ ಎಂದು ಅಪಾರ್ಥ ಮಾಡಿಕೊಳ್ಳಬಾರದು ಎಂದು ಪ್ರತಿಪಾದಿಸಿದೆ. ಕಳೆದ 5 ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಸುಳ್ಳು ಭರವಸೆ ನೀಡಿ ಜನರ ನಂಬಿಕೆ ಮತ್ತು ಆತ್ಮವಿಶ್ವಾಸಕ್ಕೆ ದ್ರೋಹ ಮಾಡಿದೆ. ಎಲ್ಲ ವಿಭಾಗಗಳಲ್ಲಿಯೂ ಈ ಸರ್ಕಾರ ವಿಫಲವಾಗಿದೆ. ಜಿಎಸ್ಟಿ, ನೋಟು ಅಮಾನ್ಯೀಕರಣದಂತ ತಪ್ಪು ನಿರ್ಧಾರ ಭಾರತದ ಆರ್ಥಿಕತೆ ಮತ್ತು ವ್ಯಾಪಾರ ಹಾಗೂ ಕೈಗಾರಿಕೆ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಲಕ್ಷಾಂತರ ಕೈಗಾರಿಕೆಗಳು ಮುಚ್ಚಿವೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು ಶೋಚನೀಯ ಸ್ಥಿತಿಯಲ್ಲಿದ್ದು, ಅಲ್ಲಿನ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ ಎಂದು ಆರೋಪಿಸಿದೆ. ಎಲ್ಲ ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಶಕ್ತಿಗಳು ಒಗ್ಗಟ್ಟಾಗಿ, ಅವಿಶ್ರಾಂತವಾಗಿ ಬಿಜೆಪಿಯ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಡುವಂತೆ ಕಾಂಗ್ರೆಸ್ ಪಕ್ಷ ಕರೆ ನೀಡಿದೆ. 2014ರಲ್ಲಿ ನೀಡಿದ ಭರವಸೆಗಳನ್ನು ಪೂರೈಸುವಲ್ಲಿ ಸರ್ಕಾರ ಹೇಗೆ ವಿಫಲವಾಗಿದೆ ಎಂಬುದನ್ನು ಜನತೆಗೆ ತಲುಪಿಸಬೇಕಿದೆ. ಇಂಥ ಸರ್ಕಾರವನ್ನು ಅಧಿಕಾರದಿಂದ ದೂರವಿಡುವಂತೆ ಮನವಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries