ರೋಡ್ ಶೋ, ಬೈಕ್ ರಾಲಿ ನಿಷೇಧಕ್ಕೆ ಸುಪ್ರೀಂ ಕೋರ್ಟಿಗೆ ಮನವಿ
0
ಮಾರ್ಚ್ 12, 2019
ಹೊಸದಿಲ್ಲಿ : ಚುನಾವಣಾ ಪ್ರಚಾರಾರ್ಥವಾಗಿ ನಡೆಸಲಾಗುವ ರೋಡ್ ಶೋ ಮತ್ತು ಬೈಕ್ ರಾಲಿಗಳು ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ಟ್ರಾಫಿಕ್ ಜಾಮ್ ಮತ್ತು ಸಾರ್ವಜನಿಕ ತೊಂದರೆಗೆ ಕಾರಣವಾಗುವುದರಿಂದ ಅವುಗಳನ್ನು ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶ ನೀಡಬೇಕೆಂದು ಕೋರಿ ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾ ನಿರ್ದೇಶಕ ವಿಕ್ರಂ ಸಿಂಗ್ ಮತ್ತು ಪರಿಸರವಾದಿ ಶೈವಿಕ ಅಗ್ರವಾಲ್ ಅವರು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯನ್ನು ತುರ್ತು ನೆಲೆಯಲ್ಲಿ ವಿಚಾರಣೆಗೆ ಎತ್ತಿಕೊಳ್ಳಬೇಕೆಂಬ ಅರ್ಜಿದಾರರ ಕೋರಿಕೆಯನ್ನು ಸಿಜೆಐ ರಂಜನ್ ಗೊಗೋಯ್ ಮತ್ತು ಜಸ್ಟಿಸ್‍ಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ ತಿರಸ್ಕರಿಸಿದೆ. ಆದರೆ ಅರ್ಜಿಯ ವಿಚಾರಣೆ ಕ್ರಮ ಪ್ರಕಾರವಾಗಿ ನಡೆಯಲಿದೆ.
ಅರ್ಜಿದಾರರ ಮನವಿಯನ್ನು ಸಿದ್ಧಪಡಿಸಿ ಸಲ್ಲಿಸಿರುವ ವಕೀಲ್ ವಿರಾಗ್ ಗುಪ್ತಾ ಅವರು ರಾಜಕೀಯ ಪಕ್ಷಗಳ ರೋಡ್ ಶೋ ನಲ್ಲಿ ಹತ್ತಕ್ಕಿಂತ ಹೆಚ್ಚು ವಾಹನಗಳ ಬಳಕೆಯಾಗದಂತೆ ಆದೇಶಿಸಬೇಕೆಂದು ಕೋರಿದ್ದಾರೆ.




