HEALTH TIPS

ಮುರಿದ ಬಾಗಿಲ ಅಂಗನವಾಡಿ-ಸೂಕ್ತ ಕಟ್ಟಡವಿಲ್ಲ: ಆರೋಗ್ಯ ಕೇಂದ್ರದಲ್ಲಿ ಮಕ್ಕಳ ಅಂಗನವಾಡಿ ತರಗತಿ, ಏಕೋಪಾಧ್ಯಾಯ ಶಾಲೆ

ಬದಿಯಡ್ಕ: ಜಿಲ್ಲೆಯಲ್ಲೇ ಅತ್ಯಧಿಕ ಜನಸಂಖ್ಯೆಯಿರುವ ಕೊರಗ ಕಾಲನಿ ಎಂಬ ಪ್ರಖ್ಯಾತಿಯ ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಪೆರಡಾಲ ಕೊರಗ ಕಾಲನಿಯಲ್ಲಿ ಸೂಕ್ತ ಕಟ್ಟಡವಿಲ್ಲದೆ ಅಂಗನವಾಡಿ ಮತ್ತು ಏಕೋಪಾಧ್ಯಾಯ ಶಾಲಾ ತರಗತಿಗಳು ಸಮೀಪದ ಸಮುದಾಯ ಭವನ(ಕಮ್ಯುನಿಟಿ ಹಾಲ್)ವನ್ನು ಆಶ್ರಯಿಸಿ ಬಳಿಕ ಇದೀಗ ವ್ಯಕ್ತಿಯೊಬ್ಬರ ಮನೆಗೆ ಸ್ಥಳಾಂತರಗೊಂಡ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಹಿಂದುಳಿದ ವರ್ಗದ ಶಿಕ್ಷಣ ಪ್ರಗತಿಗಾಗಿ ವರ್ಷಗಳ ಹಿಂದೆ ನಿರ್ಮಿಸಲಾದ ಅಂಗನವಾಡಿ ಕಟ್ಟಡವು ಪ್ರಸ್ತುತ ಶಿಥಿಲಾವಸ್ಥೆಗೆ ತಲುಪಿದ್ದು, ಸಮರ್ಪಕ ರೀತಿಯಲ್ಲಿ ಅಗತ್ಯ ಸೌಕರ್ಯಗಳನ್ನು ಕೊಡಮಾಡದ ಕಾರಣ ಅಂಗನವಾಡಿ ಕೇಂದ್ರ ಸೊರಗಿದೆ. ಸಮೀಪದಲ್ಲಿರುವ ಏಕೋಪಾಧ್ಯಾಯ ಶಾಲೆಗೂ ಸೂಕ್ತ ಕಟ್ಟಡವಿಲ್ಲದ ಕಾರಣ ಸಮುದಾಯ ಭವನಕ್ಕೆ ಸ್ಥಳಾಂತರ ಗೊಂಡಿತ್ತು. ಆ ಬಳಿಕ ಇದೀಗ ಅಲ್ಲಿಯ ಅನನುಕೂಲತೆಯಿಂದ ಸಮೀಪದ ಅಂಗಾರೆ ಎಂಬವರ ಮನೆಗೆ ಸ್ಥಳಾಂತರ ಹೊಂದಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅಂಗನವಾಡಿ ಕಟ್ಟಡದ ದುರಸ್ಥಿತಿ ಕಾರ್ಯದ ನಿಮಿತ್ತ ತರಗತಿಗಳನ್ನು ಸ್ಥಳಾಂತರಿಸಲಾಗಿತ್ತು. ಹಲವು ತಿಂಗಳು ಉರುಳಿದರೂ ಶಿಥಿಲಾವಸ್ಥೆಯಲ್ಲಿ ಶೋೀಚನೀಯವಾಗಿರುವ ಅಂಗನವಾಡಿ ಕಟ್ಟಡದ ದುರಸ್ತಿಯಾಗಲಿ, ಏಕೋಪಾಧ್ಯಾಯ ಶಾಲೆಗೆ ಸೂಕ್ತ ಕಟ್ಟಡವನ್ನಾಗಲಿ ನಿರ್ಮಿಸಲಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಶೀಘ್ರದಲ್ಲೆ ಶೌಚಾಲಯ ಸಹಿತ ಅಂಗನವಾಡಿ ಕೊಠಡಿಗಳನ್ನು ದುರಸ್ತಿಗೊಳಿಸಿ, ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿ ಮಕ್ಕಳನ್ನು ಸಮೀಪದ ಸಮುದಾಯ ಕೇಂದ್ರದ ಕಟ್ಟಡಕ್ಕೆ ಕಳುಹಿಸಲಾಗಿತ್ತು. ಸಮುದಾಯ ಭವನಕ್ಕೆ ಸ್ಥಳಾಂತರಗೊಂಡ ಅಂಗನವಾಡಿಯಲ್ಲಿ ಮಕ್ಕಳಿಗಾಗಿರುವ ಭೋಜನ ತಯಾರಿ ಅಡುಗೆ ಕೋಣೆಗೆ ತೆರಳಲು ಸರಿಯಾದ ದಾರಿಯಿಲ್ಲದ ಕಾರಣ ಸಮೀಪದ ಬೇಲಿ ಹಾರಿ ತೆರಳಬೇಕಾದ ದುರವಸ್ಥೆ ಎದುರಾಯಿತು. ಎರಡು ತಿಂಗಳು ಅಲ್ಲಿ ಕಾರ್ಯಾಚರಿಸಿದ ಅಂಗನವಾಡಿಡಿ ಇದೀಗ ಅಂಗಾರೆಯವರ ಮನೆಗೆ ಸ್ಥಳಾಂತರಗೊಂಡಿದೆ. ಅಂಗನವಾಡಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಐದು ತಿಂಗಳುಗಳು ಕಳೆದರೂ ಶೋಚನೀಯವಸ್ಥೆಯಲ್ಲಿರುವ ಅಂಗನವಾಡಿಯ ದುರಸ್ತಿ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಏಕೆ ಬೇಕಿತ್ತು ಏಕೋಪಾಧ್ಯಾಯ ಶಾಲೆ?!-ಏಕೋಪಾಧ್ಯಾಯ ಶಾಲೆಗೂ ಕಟ್ಟಡವಿಲ್ಲದೆ 18 ವರ್ಷ ಕೊರಗ ಕಾಲನಿಗೆಂದು ಶೈಕ್ಷಣಿಕ ಪ್ರಗತಿಗಾಗಿರುವ ಏಕೋಪಾಧ್ಯಾಯ ಶಾಲಾ ತರಗತಿಯನ್ನು 2000 ದಲ್ಲಿ ಆರಂಭಿಸಲಾಗಿತ್ತು. ಸಮುದಾಯ ಭವನ ಕೇಂದ್ರದ ಕಟ್ಟಡದಲ್ಲಿ ತತ್ಕಾಲಿಕವಾಗಿ ಕಾರ್ಯಾರಂಭಗೊಂಡ ಏಕೋಪಾಧ್ಯಾಯ ಶಾಲೆಗೆ 18 ವರ್ಷಗಳಾದರೂ ಸೂಕ್ತ ಕಟ್ಟಡದ ಭಾಗ್ಯ ದೊರೆಯದಿರುವುದು ದುರ್ದೈವ. ಮಳೆಗಾಲದಲ್ಲಿ ಸೋರುವ ಕಟ್ಟಡದಲ್ಲಿ ತರಗತಿ ನಡೆಸಲೂ ಕಷ್ಟಸಾಧ್ಯ. ಕಾಂಕ್ರೀಟ್ ಮೇಲ್ಛಾವಣಿಯ ಮೇಲೆ ಶೀಟುಗಳನ್ನು ಹೊದಿಸಿದ್ದರೂ ಮಳೆಗಾಲದ ವೇಳೆ ತರಗತಿ ಕೊಠಡಿಗಳಲ್ಲಿ ನೀರು ಸೋರಿಕೆ ಆಗುತ್ತಿದೆ. ಏಕೋಪಾಧ್ಯಾಯ ಶಾಲಾ ಕಟ್ಟಡಕ್ಕೆ ವರ್ಷಗಳ ಹಿಂದೆಯೇ ಬೇಡಿಕೆಯಿರಿಸಿದ್ದರೂ ಯಾವುದೇ ಕ್ರಮವನ್ನು ಸ್ಥಳೀಯಾಡಳಿತವಾಗಲಿ ಸರಕಾರವಾಗಲಿ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಹಿಂದುಳಿದ ಕೊರಗ ಸಮುದಾಯದ ಶೈಕ್ಷಣಿಕ ಮನ್ವಂತರಕ್ಕೆ ಮಾದರಿಯಾಗಬಹುದಾದ ಶಿಕ್ಷಣ ಕೇಂದ್ರಕ್ಕೆ ಸೂಕ್ತ ರೀತಿಯ ಕಟ್ಟಡ ಭಾಗ್ಯ ಒದಗಬೇಕಿದೆ. ಕೇವಲ 20 ಮಂದಿಗಷ್ಟೇ ಸ್ಥಳಾವಕಾಶ: ಏಕೋಪಾಧ್ಯಾಯ ಶಾಲಾ ತರಗತಿಗಳೊಂದಿಗೆ, ಅಂಗನವಾಡಿ ವಿದ್ಯಾರ್ಥಿಗಳಿಗೂ ತರಗತಿ ನಡೆಸಲು ಸ್ಥಳಾವಕಾಶ ಇಲ್ಲದಾಗಿದೆ. ಇದರ ಜೊತೆಯಲ್ಲಿ ಸಮುದಾಯ ಭವನದ ಹಲವು ಕಾರ್ಯಕ್ರಮಗಳು ಇದೇ ಕಟ್ಟಡದಲ್ಲಿ ನಡೆಸನಬೇಕಿದೆ. ಸುಮಾರು 40 ಕುಟುಂಬಗಳಿರುವ ಕಾಲನಿಯಲ್ಲಿ 150 ಮಂದಿ ವಿದ್ಯಾರ್ಥಿಗಳಿಗಾಗಿರುವ ಸುಸಜ್ಜಿತ ನೂತನ ಕಟ್ಟಡದ ಅವಶ್ಯಕತೆ ಇದೆ ಎಂದು ಕೊರಗ ಸಮುದಾಯದ ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 25 ವರ್ಷ ಹಳೆಯದಾದ ಸಮುದಾಯ ಭವನದಲ್ಲಿ ವೈದ್ಯಕೀಯ ಶಿಬಿರ, ವಿಚಾರಗೋಷ್ಠಿ, ಆರೋಗ್ಯ ಕಿಟ್ ವಿತರಣೆ ಮೊದಲಾದ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಜೊತೆಗೆ ಜಿಲ್ಲೆಯ ಕೊರಗ ಸಮುದಾಯ ಕೇಂದ್ರೀಕೃತವಾದ ಸರಕಾರಿ ಕಾರ್ಯಕ್ರಮಗಳ ಜಿಲ್ಲಾ ಮಟ್ದ ಉದ್ಘಾಟನೆಯಂತಹ ಮಹತ್ವದ ಕಾರ್ಯಕ್ರಮಗಳ ಆರಂಭವೂ ಇದೇ ಸಮುದಾಯ ಭವನದಲ್ಲಿ ಆಗಿದೆ ಎನ್ನುವುದೂ ಗಮನಾರ್ಹ. ಅಂಗನವಾಡಿ ಕಟ್ಟಡದ ದುರಸ್ತಿಗೆ ಸ್ಥಳೀಯ ಗ್ರಾಮ ಪಂಚಾಯತಿ ಮೂಲಕ ಯೋಜನೆ ರೂಪಿಸಲಾಗಿದೆ. ಆದರೆ ದುರಸ್ತಿ ಕಾರ್ಯವು ಆರಂಭಗೊಳ್ಳದ ಕಾರಣ ಸ್ಥಳೀಯರು ತೊಂದರೆಗೀಡಾಗಿದ್ದಾರೆ. ಸಮಯದೊಳಗೆ ದುರಸ್ತಿ ಕಾರ್ಯ ಸಹಿತ ಏಕೋಪಾಧ್ಯಾಯ ಶಾಲೆಗೆ ಸೂಕ್ತ ಕಟ್ಟಡ ಭಾಗ್ಯ ಒದಗದಿದ್ದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಕಾಲನಿವಾಸಿಗಳದ್ದಾಗಿದೆ. ಜಿಲ್ಲೆಯ ದೊಡ್ಡ ಕಾಲನಿ: ಕಾಸರಗೋಡು ಜಿಲ್ಲೆಯ ಕೊರಗ ಕಾಲನಿಗಳ ಪೈಕಿ ಪೆರಡಾಲಕೊರಗ ಕಾಲನಿ ಅತೀ ದೊಡ್ಡದು ಎಂಬ ಹೆಗ್ಗಳಿಕೆಗೂ ಒಳಗಾಗಿದೆ. ಸುಮಾರು 45 ಕ್ಕಿಂತಲೂ ಮಿಕ್ಕಿದ ಕೊರಗ ಕುಟುಂಬಗಳಿರುವ ಇಲ್ಲಿ ಸುಮಾರು 150ಕ್ಕಿಂತಲೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಸಮಾಜದ ಮುಖ್ಯ ವಾಹಿನಿಗೆ ಕರೆತರಬೇಕೆಂಬ ಉದ್ದೇಶದಿಂದ ಇಲ್ಲಿ ಆರಂಭಿಸಲಾದ ಅಂಗನವಾಡಿ, ಎಂಜಿಎಲ್‍ಸಿ-ಏಕೋಪಾಧ್ಯಾಯ ಶಾಲೆ ಮೊದಲಾದ ಯೋಜನೆಗಳು ಅಧಿಕಾರಿ ವರ್ಗದ ಅನಾಸ್ಥೆಯಿಂದ ಹಳ್ಳ ಹಿಡಿದಿರುವುದು ಪ್ರಜಾಪ್ರಭುತ್ವದ ಅಣಕ ಎನ್ನಲು ಅಡ್ಡಿಯಿಲ್ಲ. ಸರಿಯಾದ ರಸ್ತೆ ಸೌಕರ್ಯ, ಕುಡಿಯುವ ನೀರು ಇವೇ ಮುಂತಾದ ನೂರಾರು ಸವಾಲುಗಳೇ ಕಾಲನಿ ಸಂದರ್ಶನ ನಡೆಸುವ ಯಾವನಿಗಾದರೂ ಕಣ್ಣಿಗೆ ರಾಚುತ್ತದೆ.ಈ ಹಿನ್ನೆಲೆಯಲ್ಲಿ ತಿಂಗಳಿಗೆ ಸಾವಿರಾರು ರೂ.ಗಳ ಸಂಬಳವನ್ನು ಕೊರಗ ಅಭಿವೃದ್ದಿಯ ಹೆಸರಲ್ಲಿ ಕಿಸೆಯೊಳಗೆ ತಳ್ಳುವ ಮಂದಿಗೆ ಇಲ್ಲಿಯ ಸಮಸ್ಯೆಗಳು ಯಾವುದೂ ಕಾಣಿಸುತ್ತಿಲ್ಲ. ಜೊತೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯವಿರುವ ವಿದ್ಯಾನಗರದ ಕಲೆಕ್ಟರೇಟ್ ಸಮುಚ್ಚಯದಲ್ಲಿ ಕೊರಗ ಅಭಿವೃದ್ದಿ ಇಲಾಖೆಯ ಕಚೇರಿಯೊಂದು ಹವಾನಿಯಂತ್ರಿತ ವ್ಯವಸ್ಥೆಯಡಿ ತೆಪ್ಪಗೆ ಮೌನವಾಗಿದೆ. ಏನಂತಾರೆ: ಅಂಗನವಾಡಿಯ ಬಾಗಿಲುಗಳು ಮುರಿದಿದೆ. ಜೊತೆಗೆ ಮೇಲ್ಚಾವಣಿಯ ಸಮಸ್ಯೆಯೂ ಇದೆ. ಈ ಕಾರಣದಿಂದ ಈಗ ಆರೋಗ್ಯ ಕೇಂದ್ರದೊಳಗಡೆಯ ಒಂದು ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಇಲ್ಲೂ ಸಮಸ್ಯೆಗಳಿವೆ. ಈ ಬಗ್ಗೆ ಗ್ರಾ.ಪಂ. ಅಧಿಕೃತರು ಪರಿಶೀಲನೆ ನಡೆಸಿದ್ದರೂ ಈವರೆಗೆ ಪರಿಹಾರ ಉಪಕ್ರಮಗಳೇನನ್ನೂ ಕೈಗೊಂಡಿಲ್ಲ. ಪುಷ್ಪಾ. ಪೆರಡಾಲ ಕೊರಗ ಕಾಲನಿ ಅಂಗನವಾಡಿ ಶಿಕ್ಷಕಿ. ................................................................................................................................................................................ ಏಕೋಪಾಧ್ಯಾಯ ಶಾಲೆಯ ಸೂಕ್ತ ಕಟ್ಟಡ ವ್ಯವಸ್ಥೆಗೆ ಈಗಾಗಲೇ ಸಂಬಂಧಿಸಿದ ಇಲಾಖೆ ಹಾಗೂ ಗ್ರಾ.ಪಂ.ಗೆ ಮನವಿ ನೀಡಲಾಗಿದೆ. ಅಧಿಕೃತರು ಪರಿಶೀಲನೆ ನಡೆಸಿದ್ದು, ವ್ಯವಸ್ಥೆಯ ನಿರೀಕ್ಷೆ ಇರಿಸಲಾಗಿದೆ. ಬಾಲಕೃಷ್ಣ ಅಚ್ಚಾಯಿ ಶಿಕ್ಷಕರು. ಏಕೋಪಾಧ್ಯಾಯ ಶಾಲೆ ಪೆರಡಾಲ. ......................................................................................................................................................... ಗ್ರಾ.ಪಂ.ನ 2018-19ರ ಯೋಜನೆಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಿಧಿ ಮೀಸಲಿರಿಸಲಾಗಿದೆ. ಈ ಬಗ್ಗೆ ಮುಂದಿನ ಏಪ್ರಿಲ್ ತಿಂಗಳಲ್ಲಿ ಅಗತ್ಯ ಕಾರ್ಯಯೋಜನೆಗಳು ಜಾರಿಗೊಳ್ಳಲಿದೆ.ಅಲ್ಲದೆ ಏಕೋಪಾಧ್ಯಾಯ ಶಾಲೆಯ ನಿರ್ಮಾಣಕ್ಕೂ ಕ್ರಮ ಕೈಗೊಳ್ಳುವ ಬಗ್ಗೆ ರೂಪರೇಖೆಗಳು ತಯಾರಿಗೊಳಿಸಲಾಗುವುದು. ಕೆ.ಎನ್.ಕೃಷ್ಣ ಭಟ್. ಅಧ್ಯಕ್ಷರು. ಬದಿಯಡ್ಕ ಗ್ರಾ.ಪಂ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries