ಮಹಾಜನ ವಾಣಿ ವಾರ್ಷಿಕ ಸಮಾರೋಪ-ದಾಖಲೆಯ ಚಟುವಟಿಕೆಗಳೊಂದಿಗೆ ಬೆಳೆದುಬಂದ ಮಕ್ಕಳ ಬಾನುಲಿ
0
ಮಾರ್ಚ್ 02, 2019
ಬದಿಯಡ್ಕ: ಶೈಕ್ಷಣಿಕ ಪಠ್ಯಗಳ ಜೊತೆಗೆ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಉಚಿತ ಮಾರ್ಗದರ್ಶನ,ಬೆಳವಣಿಗೆಗೆ ಪೂರಕವಾದ ಪ್ರೋತ್ಸಾಹ ನೀಡುವಲ್ಲಿ ನವ ಪ್ರೇರಣೆಯಾಗುವ ರೀತಿಯಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ ವಷ್ದ ಆರಂಭದಲ್ಲಿ ರೂಪಿಸಿ, ಹೆಚ್ಚು ಜನಾನುರಾಗಿಯಾದ ಮಹಾಜನ ವಾಣಿ ಶಾಲಾ ಬಾನುಲಿ ಕೇಂದ್ರದ ವಾರ್ಷಿಕ ಸಮಾರೋಪ ಸಮಾರಂಭ ಇತ್ತೀಚೆಗೆ ಶಾಲೆಯಲ್ಲಿ ನಡೆಯಿತು.
ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ತಮಾನದ ಲಭ್ಯ ಅತ್ಯುಚ್ಚ ಸೌಕರ್ಯಗಳ ಸದ್ಬಳಕೆಯೊಂದಿಗೆ ಶಿಕ್ಷಣದ ವ್ಯಾಪ್ತಿಯನ್ನು ವಿಸ್ಕøತಗೊಳಿಸುವ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪ್ರಯತ್ನ ಶ್ಲಾಘನೀಯ. ಇಂತಹ ಪ್ರಯತ್ನಗಳು ಇನ್ನಷ್ಟು ಮೂಡಿಬರಲಿ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯ ವೆಂಕಟ್ರಾಜ ಸಿ.ಎಚ್, ಹಿರಿಯ ಶಿಕ್ಷಕಿ ವಾಣೀ ಪಿ.ಎಸ್.,ಪತ್ರಕರ್ತ ಪುರುಷೋತ್ತಮ ಭಟ್ ಕೆ ಉಪಸ್ಥಿತರಿದ್ದು ಶುಭಹಾರೈಸಿದರು.
ಮಹಾಜನ ವಾಣಿ ಬೆಳೆದುಬಂದ ಹಾದಿ:
ವಿದ್ಯಾರ್ಥಿಗಳಿಂದಲೇ ಸಂಯೋಜಿಸಲ್ಪಡುವ ಮಹಾಜನ ವಾಣಿಯನ್ನು ಕಳೆದ ಆಗಸ್ಟ್ 2 ರಂದು ಶಾಲಾ ಹಳೆ ವಿದ್ಯಾರ್ಥಿಯೂ, ಮಂಗಳೂರು ಬಾನುಲಿ ನಿಲಯದ ಕಾರ್ಯಕ್ರಮ ನಿರೂಪಕಿಯೂ ಆದ ಮಾಲತಿ ಆರ್.ಭಟ್ ಉದ್ಘಾಟಿಸಿದ್ದರು. ಅಂದಿನಿಂದ ಪ್ರತಿನಿತ್ಯ ಮಧ್ಯಾಹ್ನ 1.15 ರಿಂದ 1.30ರ ತನಕ 15 ನಿಮಿಷಗಳ ಪ್ರಸಾರ ಚಟುವಟಿಕೆ ನಡೆಸುತ್ತಿರುವ ಮಹಾಜನ ವಾಣಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳು ನಿರೂಪಕರಾಗಿ ಸುಮಾರು 50 ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರತಿ ತರಗತಿಗಳಿಗೆ ಧ್ವನಿ ವರ್ಧಕದ ಮೂಲಕ(ಸ್ಪೀಕರ್) ಪ್ರಸಾರಿಸಲ್ಪಡುವ ಈ ಮಕ್ಕಳ ಬಾನುಲಿ ನಿಲಯಕ್ಕೆ ಸುಸಜ್ಜಿತ ಧ್ವನಿ ದಾಖಲಾತಿ ಕೊಠಡಿ(ರೆಕಾರ್ಡಿಂಗ್ ರೂಂ) ವ್ಯವಸ್ಥೆಯೂ ಇದೆ. ಹಾಡು, ಸುಭಾಶಿತ, ಆಂಗ್ಲ, ಕನ್ನಡ, ಹಿಂದಿ, ಸಂಸ್ಕøತ ಭಾಷೆಗಳ ಭಾಷಣ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳು ಪ್ರಸಾರವಾಗಿವೆ. ಜೊತೆಗೆ ದಿನಕ್ಕೊಂದು ಭಾಷೆಗಳಲ್ಲಿ; ಕನ್ನಡ, ಸಂಸ್ಕøತ,ಆಂಗ್ಲ, ಹಿಂದಿಗಳಲ್ಲಿ ವಾರ್ತೆಗಳನ್ನೂ ಪ್ರಸಾರ ಮಾಡಲಾಗಿದೆ.
ವಾಟ್ಸ್‍ಫ್ ಗುಂಪುಗಳ ಮೂಲಕ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಇತರೆಡೆಗಳಿಗೆ ಆಲಿಸುವ ವ್ಯವಸ್ಥೆಯನ್ನೂ ಮಾಡಲಾಗಿರುವುದರಿಂದ ಹೆಚ್ಚು ಜನಪ್ರೀಯತೆ ಗಳಿಸಲು ಸಾಧ್ಯವಾಯಿತೆಂದು ಶಿಕ್ಷಕರು ತಿಳಿಸುತ್ತಾರೆ.
ಪ್ರಸ್ತುತ ವಿದ್ಯಾರ್ಥಿಗಳು ಪರೀಕ್ಷೆಯ ಬಿಸಿಯಲ್ಲಿರುವಾಗ ಕಲಿಕೆಗೆ ಪ್ರಧಾನ್ಯತೆ ನೀಡುವ ಅಗತ್ಯದ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷದ ಪ್ರಸಾರ ಕೊನೆಗೊಳಿಸಲಾಗಿದ್ದು, ಮುಂದಿನ ವಿದ್ಯಾಭ್ಯಾಸ ವರ್ಷ ಇನ್ನಷ್ಟು ಸುಧಾರಣಾ ಕ್ರಮದೊಂದಿಗೆ ಇನ್ನಷ್ಟು ಪರಿಣಾಮಕಾರಿ ಪ್ರಸಾರ ತಂತ್ರದೊಂದಿಗೆ ಮತ್ತೆ ಮಹಾಜನ ವಾಣಿ ಉಲಿಯಲಿದೆ ಎಂದು ಸಂಬಂಧಪಟ್ಟ ವಿಭಾಗದ ಶಿಕ್ಷಕರು ತಿಳಿಸಿರುವರು.
ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಹರ್ಷಿತಾ ಸ್ವಾಗತಿಸಿ, ಕೃಪಾನಿಧಿ ವಂದಿಸಿದರು. ಅನುಪ್ರಿಯಾ ಹಾಗೂ ಅದಿತಿ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ, ವರಲಕ್ಷ್ಮೀ, ಆಶಾ ಮೊದಲಾದವರು ಬಾನುಲಿ ನಿಲಯದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.




