HEALTH TIPS

ಸಮರಸ ಶಬ್ದಾಂತರಂಗ ಸೌರಭ- ಕಲಿಕೆ-02 - ಲೇಖನ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ

       
         ಇಂದಿನ ಟಿಪ್ಪಣಿ-
    1. 'ನಲ್ಲಿ*ನೀರು ಅನಾವಶ್ಯಕ ಪೋಲಾಗದಿರಲಿ
    ಮಾರ್ಕೆಟ್‍ನಲ್ಲಿ, ಸ್ಕೂಲ್‍ನಲ್ಲಿ, ಪಾರ್ಲಿಮೆಂಟ್‍ನಲ್ಲಿ, ಫೇಸ್‍ಬುಕ್‍ನಲ್ಲಿ... ಹೀಗೆ ಇಂಗ್ಲಿಷ್ ಪದಗಳಿಗೆ ಸಪ್ತಮಿ ವಿಭಕ್ತಿ ಪ್ರತ್ಯಯ *ನಲ್ಲಿ* ನಮಗೆ ಅಭ್ಯಾಸವಾಗಿಬಿಟ್ಟಿದೆ. *ನಲ್ಲಿ* ಒಂದೇ ಇರುವುದೋ ಎಂಬಂತೆ ನಾವು ಮನೇನಲ್ಲಿ, ಬೀದೀನಲ್ಲಿ, ಶಾಲೇನಲ್ಲಿ, ಪ್ರಜಾವಾಣಿನಲ್ಲಿ ಅಂತೆಲ್ಲ ತಪ್ಪಾಗಿ ಬಳಸುತ್ತೇವೆ. ಕನ್ನಡದ ನಾಮಪದಗಳಿಗೆ ಸಪ್ತಮಿ ವಿಭಕ್ತಿ ಪ್ರತ್ಯಯವು *ನಲ್ಲಿ*ಯೇ ಆಗಿರುತ್ತದೆ ಅಂತಿಲ್ಲ. ಪದದ ಕೊನೆಯ ಸ್ವರವನ್ನು ಅವಲಂಬಿಸಿ *ಯಲ್ಲಿ*, *ದಲ್ಲಿ*, *ಳಲ್ಲಿ*, *ನಲ್ಲಿ* ಮುಂತಾದುವು ಬಳಕೆಯಾಗುತ್ತವೆ.
     *ಎ*ಕಾರಾಂತ ಮತ್ತು *ಇ*ಕಾರಾಂತ ಪದಗಳಿಗೆ *ಯಲ್ಲಿ* ಬಳಸಬೇಕು. ಉದಾ: ಮನೆಯಲ್ಲಿ, ಶಾಲೆಯಲ್ಲಿ, ಮದುವೆಯಲ್ಲಿ, ಬೀದಿಯಲ್ಲಿ, ಗುಂಡಿಯಲ್ಲಿ, ಇಡ್ಲಿಯಲ್ಲಿ, ನಲ್ಲಿಯಲ್ಲಿ ಇತ್ಯಾದಿ.
     *ಅ*ಕಾರಾಂತ ನಪುಂಸಕ ಪದಗಳಿಗೆ *ದಲ್ಲಿ* ಬಳಸಬೇಕು. ಉದಾ: ಗಿಡದಲ್ಲಿ, ಮರದಲ್ಲಿ, ಕೊಳದಲ್ಲಿ, ಮಸಣದಲ್ಲಿ. ಅಕಾರಾಂತ ಪುಲ್ಲಿಂಗ ಪದಗಳಿಗೆ *ನಲ್ಲಿ* (ರಾಮನಲ್ಲಿ, ಕೃಷ್ಣನಲ್ಲಿ), ಸ್ತ್ರೀಲಿಂಗ ಪದಗಳಿಗೆ *ಳಲ್ಲಿ* (ಅಕ್ಕಳಲ್ಲಿ, ವಿಮಲಳಲ್ಲಿ) ಬಳಕೆಯಾಗುತ್ತವೆ.
     *ಉ*ಕಾರಾಂತ ಪದಗಳಿಗೆ *ವಿನಲ್ಲಿ* ಬರಬಹುದು. ಉದಾ: ನಿಘಂಟುವಿನಲ್ಲಿ, ಶಂಭುವಿನಲ್ಲಿ, ವಧುವಿನಲ್ಲಿ, ಪೆರುವಿನಲ್ಲಿ ಇತ್ಯಾದಿ. ಅಥವಾ, *ಇನಲ್ಲಿ* ಸೇರಬಹುದು. ಊರಿನಲ್ಲಿ, ಸಾರಿನಲ್ಲಿ, ಹಕ್ಕಿನಲ್ಲಿ
....................................................................................................
     2. ಅಂತಹ ಅಥವಾ ಅಂಥ - ಇವುಗಳಲ್ಲೊಂದಿರಲಿ. ಅಂಥಹ ಬೇಡ.
    *ಅಂತಹ* ಎಂದು ಅಲ್ಪಪ್ರಾಣ ತ + ಹ ಅಕ್ಷರವಿರುವ ರೂಪ ಸರಿ; *ಅಂಥ* ಎಂದು ಮಹಾಪ್ರಾಣ ಥ ಇರುವ ರೂಪ ಸರಿ; ಆದರೆ ಮಹಾಪ್ರಾಣ ಥ ಆದಮೇಲೆ ಮತ್ತೆ ಹ ಸಲ್ಲದು. ಬೇರೆ ಪದಗಳೊಡನೆ ಪ್ರತ್ಯಯವಾಗಿ ಸೇರಿದಾಗಲೂ ಅದೇ ನಿಯಮ. ತಾಯಿಯಂತಹ ಅಥವಾ ತಾಯಿಯಂಥ ಎರಡೂ ಸರಿ. ತಾಯಿಯಂಥಹ ತಪ್ಪು.
.................................................................................................
        3. *ಕನ್ನಡತಿ*ಗಿಂತ *ಕನ್ನಡಿತಿ* ಹೆಚ್ಚು ಸರಿ.
    ಸಂಸ್ಕೃತದ ' ಸ್ತ್ರೀ ' ಶಬ್ದವು ಪ್ರಾಕೃತದಲ್ಲಿ 'ಇತ್ತಿ' ಎಂದಾಗಿ, ಕನ್ನಡದಲ್ಲಿಯೂ *ಇತ್ತಿ* ಅಥವಾ ಇತಿ ಎಂದು ಸ್ತ್ರೀಲಿಂಗವಾಚಕ ಪ್ರತ್ಯಯರೂಪ ಆಗುತ್ತದೆ. ಒಕ್ಕಲಿಗ - ಒಕ್ಕಲಿಗಿತ್ತಿ. ಹೂವಾಡಿಗ - ಹೂವಾಡಿಗಿತ್ತಿ. ನಾಯಕ - ನಾಯಕಿತಿ ಇತ್ಯಾದಿ. ಹೀಗೆ ಕನ್ನಡಿಗ ಎಂಬುದಕ್ಕೆ ಕನ್ನಡಿಗಿತ್ತಿ ಅಥವಾ ಕನ್ನಡಿಗಿತಿ ಆಗಬಹುದು. ಮೊಟಕುಗೊಳಿಸಿ ಕನ್ನಡಿತಿ ಎಂದರೂ ಸರಿಯೇ. ಆದರೆ ಕನ್ನಡತಿ ಎಂಬ ತಪ್ಪು ರೂಪ ರೂಢಿಯಾಗಿಬಿಟ್ಟಿದೆ.
                             ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ 
                   ನಾಳೆಗೆ ಮುಂದುವರಿಯುವುದು..............
     FEEDBACK: samarasasudhi@gmail.com

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries