ಮುಳ್ಳೇರಿಯ: ಡೆಂಗ್ಯೂ ಜ್ವರ ಹರಡಲಿರುವ ಸಾಧ್ಯತೆಯನ್ನು ಮನಗಂಡು ಕಾರಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೊಳ್ಳೆ ನಿರ್ಮೂಲನಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆರೋಗ್ಯ ಇಲಾಖೆಯ ನೌಕರರೊಂದಿಗೆ ಎನ್‍ಎಸ್‍ಎಸ್ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಶುಚೀಕರಣದಲ್ಲಿ ತೊಡಗಿಕೊಂಡರು.
ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಎನ್‍ಎಸ್‍ಎಸ್ ಕಾರ್ಯಕರ್ತರು 220ರಷ್ಟು ಮನೆಗಳಿಗೆ ಭೇಟಿ ನೀಡಿ ಕಾರಡ್ಕ ಗ್ರಾಮ ಪಂಚಾಯತಿ 12, 13, 14ನೇ ವಾರ್ಡ್‍ಗಳ ಕಂಗು ಮತ್ತು ರಬ್ಬರ್ ತೋಟಗಳಲ್ಲಿ ಪಾಲಿಸಬೇಕಾದ ಮಳೆಗಾಲ ಜಾಗೃತಾ ಕ್ರಮಗಳ ಕುರಿತು ತಿಳಿಸಿದರು. ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿಯ ಅಧ್ಯಕ್ಷ ಎ.ವಿಜಯಕುಮಾರ್, ಆರೋಗ್ಯ ಪರಿವೀಕ್ಷಕ ದೀಪು ಮೊದಲಾದವರು ನೇತೃತ್ವ ನೀಡಿದರು.




