HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ-23-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

                           ಇಂದಿನ ಮೂರು ಟಿಪ್ಪಣಿಗಳು
  ೧. ‘ಆದ’ದ್ದೆಲ್ಲ ಒಳಿತೇ ಆಯಿತು ಅಂತೇನಿಲ್ಲ!

ಅ) ೨೦೧೩ರಲ್ಲಿ ತರಂಗ ಸಂಪಾದಕಿಯಾದ ಸಂಧ್ಯಾ ಪೈ ಅವರಿಗೆ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು.
ಆ) ಸೂಚನಾಫಲಕದಲ್ಲಿ ಅಂಕಣಬರಹ ಅಂಟಿಸಲ್ಪಟ್ಟಿದ್ದನ್ನು ನೋಡಿ ಲೇಖಕರಾದ ಶಿವಾನಂದ ಕಳವೆಯವರು ಈ ಚಿತ್ರವನ್ನು ಕಳಿಸಿದ್ದಾರೆ.
ಇ) ಪುಸ್ತಕ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿ ಕನ್ನಡಪ್ರಭ ಪ್ರಧಾನಸಂಪಾದಕರಾದ ರವಿ ಹೆಗಡೆಯವರು ಅಂತರಜಾಲ ಕ್ರಾಂತಿಯ ಬಗ್ಗೆ ಮಾತನಾಡಿದರು.
ಈ) ವೈರಲ್ ವಿಡಿಯೋದಲ್ಲಿ ಕೆಪಿಎಸ್‌ಸಿ ಅಧ್ಯಕ್ಷರಾದ ಶ್ಯಾಮ ಭಟ್ ಲಂಚದ ವಿಚಾರ ಮಾತನಾಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಉ) ಇವತ್ತು ನಮ್ಮ ಹಾಸ್ಟೆಲ್‌ನ ಅಡುಗೆಭಟ್ಟರಾದ ಸುಬ್ರಾಯ ಭಟ್ಟರನ್ನು ನೆನಪಿಸಿಕೊಂಡೆ.


ಮೇಲಿನ ವಾಕ್ಯಗಳಲ್ಲಿ ಮೇಲ್ನೋಟಕ್ಕೆ ಆಭಾಸವೆನಿಸುವಂಥದ್ದೇನಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ-

ಅ) ಸಂಧ್ಯಾ ಪೈ ತರಂಗ ಸಂಪಾದಕಿಯಾದದ್ದು ೨೦೧೩ರಲ್ಲಿ ಅಲ್ಲಅವರಿಗೆ ಡಾಕ್ಟರೇಟ್ ಸಿಕ್ಕಿದ್ದು ೨೦೧೩ರಲ್ಲಿ.
ಆ) ಸೂಚನಾಫಲಕದಲ್ಲಿ ಅಂಕಣಬರಹ ಅಂಟಿಸಲ್ಪಟ್ಟಿದ್ದನ್ನು ನೋಡಿ ಶಿವಾನಂದ ಕಳವೆಯವರು ಲೇಖಕರಾದದ್ದಲ್ಲ. ಅದಕ್ಕಿಂತ ಮುಂಚೆಯೇ ಅವರು ಲೇಖಕರಾಗಿದ್ದಾರೆ.
ಇ) ರವಿ ಹೆಗಡೆಯವರು ಪುಸ್ತಕ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿ ಕನ್ನಡಪ್ರಭ ಪ್ರಧಾನಸಂಪಾದಕರಾದದ್ದಲ್ಲಪ್ರಧಾನಸಂಪಾದಕರಾಗಿದ್ದುಕೊಂಡೇ ಪುಸ್ತಕ ಬಿಡುಗಡೆಗೆ ಆಹ್ವಾನದ ಮೇರೆಗೆ ಬಂದಿದ್ದರು.
ಈ) ಶ್ಯಾಮ ಭಟ್ ಕೆಪಿಎಸ್‌ಸಿ ಅಧ್ಯಕ್ಷರಾದದ್ದು ವೈರಲ್ ವಿಡಿಯೋದಲ್ಲಿ ಅಲ್ಲ. ವಿಡಿಯೋ ವೈರಲ್ ಆಗುವ ಮೊದಲೇ ಅವರು ಅಧ್ಯಕ್ಷರಾಗಿದ್ದರುಲಂಚವನ್ನೂ ಕಬಳಿಸುತ್ತಿದ್ದರಿರಬಹುದು.
ಉ) ಸುಬ್ರಾಯ ಭಟ್ಟರು ದಶಕಗಳ ಹಿಂದೆಯೇ ಹಾಸ್ಟೆಲ್‍ನ ಅಡುಗೆಭಟ್ಟರಾಗಿದ್ದರು. ಇವತ್ತು ಅವರನ್ನು ನೆನಪಿಸಿಕೊಂಡದ್ದು ಅಷ್ಟೇ.

ಅಂದರೆಹುದ್ದೆ/ಸ್ಥಾನದ ಹೆಸರಿನೊಡನೆ ‘ಆದ’ ಸೇರಿಸಿದರೆ ಆ ವಾಕ್ಯವು ಆಭಾಸಕ್ಕೆಡೆ ಮಾಡುವ ಸಾಧ್ಯತೆಯಿದೆ ಅಂತಾಯ್ತುಆಭಾಸವಿಲ್ಲದಂತೆ ಮಾಡಲು ‘ಆದ’ ಪ್ರತ್ಯಯವನ್ನು ತೆಗೆದರಾಯ್ತು!  ಶಿಷ್ಟ ಬರಹದಲ್ಲಿ ಸ್ಪಷ್ಟತೆಇರಬೇಕೆಂದಿದ್ದರೆ ಈ ರೀತಿಯ ಆಭಾಸಗಳು ನುಸುಳದಂತೆ ನೋಡಿಕೊಳ್ಳಬೇಕು. ಹಿಂದಿನ ಪದ ಆದ ಬಳಿಕ ಅಲ್ಪವಿರಾಮ ಕೊಟ್ಟು ‘ಆದ’ವನ್ನು ಉಳಿಸಿಕೊಳ್ಳಬಹುದು ನಿಜಆದರೂ ವಾಕ್ಯ ಚಿಕ್ಕ-ಚೊಕ್ಕ ಆಗಿದ್ದರೆ ಒಳ್ಳೆಯದಲ್ಲವೇ? ‘ಶ್ರೀಯುತರಾದ, ’ಶ್ರೀಮತಿಯಾದ’ (ಶ್ರೀಮತಿಯರಾದ ಎಂದರಂತೂ ಮತ್ತೂ ಆಭಾಸ!) ಮುಂತಾದ ಬಳಕೆಗಳಲ್ಲೆಲ್ಲ ಶ್ರೀಯುತ....ಶ್ರೀಮತಿ... ಅಂತಷ್ಟೇ ಹೇಳಿದರೆ/ಬರೆದರೆ ಸಾಕಾಗುತ್ತದೆಗೌರವಕ್ಕೇನೂಚ್ಯುತಿಯಾಗುವುದಿಲ್ಲ
====
೨. ಪರವಾಗಿದೆಯೋ ಪರವಾಗಿಲ್ಲವೋ?

ಅಡ್ಡಿಯಿಲ್ಲತೊಂದರೆಯೇನಿಲ್ಲದೂರುವಂಥದ್ದೇನಿಲ್ಲ ಮುಂತಾದ ಅರ್ಥಗಳಿಗಾಗಿ ಕನ್ನಡದಲ್ಲಿ ಬಳಕೆಯಾಗುವ ‘ಪರವಾಗಿಲ್ಲ’ ಎಂಬ ಪದದ ಮೂಲ ಹಿಂದೀ ಭಾಷೆಯ (ಅಲ್ಲಿಗೆ ಫಾರಸೀ ಭಾಷೆಯಿಂದ ಬಂದಿರುವ) ‘ಪರವಾಹ್ ನಹೀ’. ಹಿಂದೀಯನ್ನು ನಖಶಿಖಾಂತ ದ್ವೇಷಿಸುವ ತಮಿಳಿಗರಲ್ಲಿಯೂ ಅದು ಬಳಕೆಯಲ್ಲಿದೆ ಎನ್ನುವುದು ಸ್ವಾರಸ್ಯಕರ ಸಂಗತಿ. ‘ಏಕ್ ದೂಜೇ ಕೇ ಲಿಯೆ’ ಸಿನೆಮಾದಲ್ಲಿ ಹಿಂದೀ ಮಾತನಾಡುವ ರತಿ ಅಗ್ನಿಹೋತ್ರಿ “ತೇರೇ ಮೇರೇ ಬೀಚ್ ಮೇ..." ಎಂದು ಹಾಡುವಾಗತಮಿಳು ಮಾತನಾಡುವ ಕಮಲಹಾಸನ್ “ಪರವಾ ಇಲ್ಲ್ಯೇ ನೀ ನಲ್ಲ ಪಾಡ್ರೇ!" ಎನ್ನುತ್ತಾನೆ. ತೆಲುಗಿನಲ್ಲಿ ‘ಪರವಾ ಲೇದು’ ಅಂತಿದೆವೇಗಗತಿಯಿಂದ ‘ಪರ್ಲೇದು’ ಆಗಿದೆ. ಕನ್ನಡದಲ್ಲಿಯೂ ಅದೇ ತೆರನಾದ ಬಳಕೆ ‘ಪರವಾ ಇಲ್ಲ’. ಆಡುಮಾತಿನಲ್ಲಿ ಅದು ‘ಪರ್ವಾ ಇಲ್ಲ’ ಆಗಿವೇಗವಾಗಿ ಉಚ್ಚರಿಸುವಾಗ ‘ಪರ್ವಾಗಿಲ್ಲ’ ಆಗಿಶಿಷ್ಟ ಬರವಣಿಗೆಯಲ್ಲಿ ‘ಪರವಾಗಿಲ್ಲ’ ಆಗಿಹೋಗಿದೆ. ಆದರೆ ಒಂದು ತೊಡಕೇನೆಂದರೆ ‘ಪರವಾಗಿಲ್ಲ’ ಎಂಬ ಪದವನ್ನು ನಾವು “ಈ ವಿಚಾರದಲ್ಲಿ ನಾನವನ ಪರವಾಗಿಲ್ಲ", “ಮೋಡ ಕವಿದಿರುವುದು ನೋಡಿದರೆ ಇವತ್ತಿನ ಹವಾಮಾನವು ಕ್ರಿಕೆಟ್ ಪಂದ್ಯದ ಪರವಾಗಿಲ್ಲ", "ಸ್ವಲ್ಪ ಮಳೆಹನಿ ಬಿದ್ದರಂತೂ ಪಿಚ್ ಭಾರತದ ಪರವಾಗಿಲ್ಲ" ಮುಂತಾದ ಸಂದರ್ಭಗಳಲ್ಲೂ ಬಳಸುತ್ತೇವೆ. ಹಾಗಾಗಿ ‘ಪರವಾ ಇಲ್ಲ’ ಎಂದು  ಬಿಡಿಸಿ ಬರೆಯುವುದೇ ಒಳ್ಳೆಯದು. ಪರವಾಯಿಲ್ಲ ಎಂದು  ಯಕಾರಾಗಮ ಸಂಧಿ ಮಾಡಲಿಕ್ಕೂಆಗುತ್ತದೆ. ‘ಪರವಾಇಲ್ಲ’ ಎಂದು ಸಹ ಬರೆಯಬಹುದುಏಕೆಂದರೆ ಉಚ್ಚರಿಸುವಾಗ ಒಂದೇ ಪದವಾಗಿ ಉಚ್ಚರಿಸುತ್ತೇವಲ್ಲ?  

====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:

ಅ) ಮದ್ಯಪಾನ ಸರಿ (ಪದ ಬರೆಯುವ ರೀತಿ ಸರಿ ಎಂದಿದ್ದುಕ್ರಿಯೆ ಅಲ್ಲ). ಮಧ್ಯಪಾನ ತಪ್ಪು
ಆ) ಧೂಮಪಾನ ಸರಿ (ಪದ ಬರೆಯುವ ರೀತಿ ಸರಿ ಎಂದಿದ್ದು. ಕ್ರಿಯೆ ಅಲ್ಲ). ಧೂಮ್ರಪಾನ ಎಂದು ಬರೆದರೆ ಆ ಅರ್ಥ ಬರುವುದಿಲ್ಲ. ಏಕೆಂದರೆ ಧೂಮ = ಹೊಗೆಧೂಮ್ರ = ಬೂದಿ ಬಣ್ಣ. ಲೋಬಾನದಂಥ ವಾಸನಾದ್ರವ್ಯಎಂಬ ಅರ್ಥವೂ ಇದೆ. ಧೂಮ್ರವರ್ಣ ಎಂದು ಗಣಪತಿಯ ಒಂದು ಹೆಸರು.
ಇ) ಧುರಂಧರ ಸರಿ (ಭಾರವನ್ನು/ಹೊಣೆಗಾರಿಕೆಯನ್ನು ಹೊತ್ತಿರುವಮುಂದಾಳುಧುರೀಣಯಜಮಾನಶ್ರೇಷ್ಠಉತ್ತಮ ಎಂಬ ಅರ್ಥಗಳಿವೆ). ದುರಂಧರ ತಪ್ಪು.
ಈ) ಚಾತಕ ಪಕ್ಷಿ ಸರಿ (ಮಳೆ ಹನಿಗಾಗಿ ಬಾಯ್ದೆರೆದು ನಿಂತಿರುತ್ತದೆ ಎಂಬ ಕಲ್ಪನೆಗೆ ಸಂಬಂಧಿಸಿದ ಹಕ್ಕಿ). ಜಾತಕ ಪಕ್ಷಿ ಎಂದು ಬರೆಯಬಾರದು.
ಉ) ಘಟೋತ್ಕಚ ಸರಿ (ಭೀಮನಿಂದ ಹಿಡಿಂಬೆಯಲ್ಲಿ ಹುಟ್ಟಿದ ರಾಕ್ಷಸ). ಘಟೋದ್ಗಜ ಭೀಮ-ಹಿಡಿಂಬೆ ದಂಪತಿಯ ಪುತ್ರ ಅಲ್ಲಮುದ್ರಾರಾಕ್ಷಸನ ಪುತ್ರನಿರಬಹುದು. :

                                              ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries