ಕಾಸರಗೋಡು: ತೀವ್ರ ಮಳೆಯಿಂದ ಭೂಕುಸಿತ ಉಂಟಾಗಿ ಸಂಕಷ್ಟಕ್ಕೊಳಗಾಗಿರುವ ಪ್ರದೇಶಗಳಿಗೆ ಭಾನುವಾರ ಅಪರಾಹ್ನ ವಯನಾಡ್ ಸಂಸದ ರಾಹುಲ್ ಗಾಂಧಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಕರಿಪ್ಪೂರ್ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ರಾಹುಲ್ ಬಳಿಕ ಮಲ್ಲಪ್ಪುರಂ ಜಿಲ್ಲೆಯಲ್ಲಿ ಅತೀ ಭೀಕರ ಭೂಕುಸಿತ ಉಂಟಾದ ಕವಳಪ್ಪಾರ ಪ್ರದೇಶದ ಪುನರತ್ ವಸತಿ ಕೇಂದ್ರವಾದ ಕವಳಪ್ಪಾರ ಭೂಈದಾನಂ ಚರ್ಚ್ ಕೇಂದ್ರಕ್ಕೆ ಭೆಟಿ ನೀಡಿ ನಿರ್ವಸಿತರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದರು. ಬಳಿಕ ಮಲಪ್ಪುರಂ ಕಲೆಕ್ಟರೇಟ್ ನಲ್ಲಿ ನಡೆದ ಅವಲೋಕನ ಸಭೆಯಲ್ಲೂ ಭಾಗವಹಿಸಿದರು. ಬಳಿಕ ಕೋಝಿಕ್ಕೋಡಿನ ಅತಿಥಿ ಗೃಹದಲ್ಲಿ ವಿಶ್ರಾಂತಿಗೈದು ಇಂದು(ಸೋಮವಾರ) ಬೆಳಿಗ್ಗೆ ತಮ್ಮ ಸ್ವ ಕ್ಷೇತ್ರವಾದ ವಯನಾಡಿನ ಕಲ್ಪಟ್ಟಕ್ಕೆ ಆಗಮಿಸುವರು. ವಯನಾಡಿನ ಭೂಕುಸಿತಗೊಂಡ ಗ್ರಾಮಗಳನ್ನು ಸಂದರ್ಶಿಸಿ, ಜಿಲ್ಲಾ ಕೇಂದ್ರಸ್ಥಾನದಲ್ಲಿ ನಡೆಯುವ ಅವಲೋಕನ ಸಭೆಯಲ್ಲೂ ಭಾಗವಹಿಸುವರು.
ರಾಜ್ಯ ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ, ಅಖಿಲ ಭಾರತ ಕಾಂಗ್ರೆಸ್ಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮೊದಲಾದವರು ರಾಹುಲ್ ಗಾಂಧಿಯ ಜೊತೆಗಿರುವರು. ರಾಜ್ಯದಲ್ಲೇ ಭೀಕರ ಭೂಕುಸಿತದಿಂದಾಗಿ ಅತೀ ಹೆಚ್ಚು ನಾಶನಷ್ಟಗಳು ಉಂಟಾಗಿರುವುದು ರಾಹುಲ್ ಗಾಂಧಿ ಪ್ರತಿನಿಧೀಕರಿಸುವ ವಯನಾಡ್ ಜಿಲ್ಲೆಯಲ್ಲಾಗಿದ್ದು ಈ ಹಿನ್ನೆಲೆಯಲ್ಲಿ ಅವರ ಇಂದಿನ ಭೇಟಿ ಮಹತ್ವದ್ದಾಗಿದೆ. ದುರಂತ ನಿರ್ವಹಣೆಯ ಬಗ್ಗೆ ರಾಹುಲ್ ಈಗಾಗಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಪೋನ್ ಸಂಭಾಷಣೆ ನಡೆಸಿರುವರೆಂದು ತಿಳಿದುಬಂದಿದೆ.



