ಪುಸ್ತಕ: ಮರೆತು ಹೋದ ಮೈಸೂರಿನ ಪುಟಗಳು
ಲೇಖಕರು: ಧಮೇರ್ಂದ್ರ ಕುಮಾರ್ ಅರೇನಹಳ್ಳಿ.
ವಿಮರ್ಶಾ ಬರಹ:ಚೇತನಾ ಕುಂಬಳೆ
ಕರ್ನಾಟಕ ರಾಜ್ಯದ ಒಂದು ಪ್ರಸಿದ್ಧ ನಗರ ಮೈಸೂರ ಹಿಂದೆ ಮೈಸೂರು ಸಂಸ್ಥಾನದ ರಾಜಧಾನಿಯಾಗಿತ್ತು. ಈಗ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯೆಂದು ಕರೆಯಲಾಗುತ್ತದೆ. ಡಿಗ್ರಿಯಲ್ಲಿರುವಾಗ ಮೈಸೂರಿನ ಚರಿತ್ರೆಯನ್ನು ಮೊದಲ ಬಾರಿಗೆ ಓದಿದ ನೆನಪು. ಈಗಲೂ ಮೈಸೂರು ಎಂದಾಕ್ಷಣ ಕೃಷ್ಣರಾಜ ಒಡೆಯರು, ಹೈದರಾಲಿ, ಟಿಪ್ಪು ಸುಲ್ತಾನ್ ನಂಥ ಪ್ರಮುಖ ರಾಜರೂ, ಅರಮನೆ, ಜಗನ್ಮೋಹನ ಅರಮನೆ, ಬೃಂದಾವನ, ಕೆ.ಆರ್ ಎಸ್., ಚಾಮುಂಡಿ ಬೆಟ್ಟ ದಸರಾ ಹಬ್ಬ ಹೀಗೆ ಹಲವು ವಿಷಯಗಳು ಮನಸ್ಸಿನೊಳಗೆ ಒಮ್ಮೆಲೇ ದಾಳಿಯಿಡುತ್ತವೆ. ಕೆಲವು ವಾರಗಳ ಹಿಂದೆ ಮುಖಪುಸ್ತಕದಲ್ಲಿ ಈ ಪುಸ್ತಕ ಕಣ್ಣಿಗೆ ಬಿದ್ದಾಗ ಓದಲೇಬೇಕೆನಿಸಿತು. ಯಾಕೆಂದರೆ ಇತಿಹಾಸದಲ್ಲಿ ಹೇಳದೇ ಉಳಿಸಿ ವಿಷಯಗಳು ಯಾವುದೆಂಬ ಕುತೂಹಲ. ಅವುಗಳನ್ನೂ ತಿಳಿದುಕೊಳ್ಳಬೇಕೆಂಬ ಹಂಬಲ. ಕೇಳಿದ ತಕ್ಷಣ ಗುಬ್ಬಚ್ಚಿ ಸತೀಶ್ ಅವರು ಈ ಪುಸ್ತಕವನ್ನು ಕಳುಹಿಸಿಕೊಟ್ಟರು.
ಮೈಸೂರಿನಲ್ಲೇ ಹುಟ್ಟಿ ಬೆಳೆದ ಲೇಖಕ ಧಮೇರ್ಂದ್ರ ಕುಮಾರ್ ಅವರು ಎಂಜಿನಿಯರಿಂಗ್ ಮುಗಿಸಿ ವಿವಿಧ ದೇಶಘಳಲ್ಲೂ ರಾಜ್ಯಗಳಲ್ಲೂ ದುಡಿದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 'ಸವಿ ನೆನಪೇ ಮನದಲ್ಲಿ ಆರಾಧಾನೆ' ಇವರ ಮೊದಲ ಕೃತಿ. ಇವರಲ್ಲಿನ ಇತಿಹಾಸದಲ್ಲಿ ವಿಶೇಷ ಆಸಕ್ತಿಯೇ ಮರೆತು ಹೋದ ಮೈಸೂರಿನ ಪುಟಗಳು ಕೃತಿ ರಚನೆಗೆ ಕಾರಣವಾಯಿತೇನೋ.
ಗೋಮಿನಿ ಪ್ರಕಾಶನದಿಂದ ಪ್ರಕಟಗೊಂಡ ಈ ಪುಸ್ತಕದಲ್ಲಿ ಮೈಸೂರಿಗೆ ಸಂಬಂಧಿಸಿದ ಹಲವು ರೋಚಕ ಕಥೆಗಳಿವೆ ವಿಶೇಷ ಮಾಹಿತಿಗಳಿವೆ, ಎಲ್ಲವನ್ನೂ ಒಂದೆರಡು ಪುಟಗಳಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಹೇಳಲಾಗಿದೆ. ಮಹಾರಾಜರ ವಂಶಾವಳಿಯೊಂದಿಗೆ ಮರೆತು ಹೋದ ಮೈಸೂರಿನ ಒಂದೊಂದೇ ಪುಟಗಳು ನಮ್ಮೆದುರಿಗೆ ತೆರೆದುಕೊಳ್ಳುತ್ತವೆ. ಜಯಚಾಮರಾಜ ಒಡೆಯರ ಕಾಲದಲ್ಲಿ 'ಸಾಬು' ಅಲಿಯಾಸ್ ಅಬ್ದುಲ್ ಕಾದಿರ್ ಮತ್ತು ಪಟ್ಟದಾನೆಯ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸುವಲ್ಲಿ ಆನೆ ತನ್ನ ಒಡೆಯನ ಮೇಲಿಟ್ಟ ಪ್ರೀತಿಯ ದರ್ಶನವಾಗುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಮಾದಪ್ಪನವರು ಮಾಡಿಕೊಟ್ಟ ಮೈಸೂರುಪಾಕ ಇಂದಿಗೂ ಹಲವರ ನಾಲಗೆಯಲ್ಲಿ ನೀರೂರಿಸುತ್ತದೆ.ಅಂದು ಪ್ರಜೆಗಳಿಗಾಗಿ ತೆರೆದ ಅಂಗಡಿ ಇಂದಿಗೂ ಮಾದಪ್ಪನ ವಂಶದವರು ನಡೆಸಿಕೊಂಡು ಬರುತ್ತಿರುವುದು ಅಚ್ಚರಿಯ ಸಂಗತಿ. ಮೈಸೂರಲ್ಲಿ ಈಗಲೂ ಅಲಮೇಲಮ್ಮನ ಚಿನ್ನದ ಪ್ರತಿಮೆಗೆ ಆಯುಧ ಪೂಜೆಯಂದು ಪೂಜೆಸುವ ವಿಷಯ ತಿಳಿಸುತ್ತಾರೆ. ಮೈಸೂರಿನ ಅರಸರು ಧರ್ಮಕ್ಕೂ ಪ್ರಾಧಾನ್ಯ ನೀಡಿದವರು, ಬಿಳಿಗಿರಿರಂಗನ ದೇವಸ್ಥಾನ, ಪಶುಪತಿನಾಥ ದೇವಾಲಯ, ಸುಬ್ರಹ್ಮಣ್ಯನ ಗುಡಿಗಳನ್ನು ಕಟ್ಟಿಸಿದ ಕೀರ್ತಿ ಮೈಸೂರು ರಾಜರದ್ದು. ಅಲ್ಲಿ ನಡೆಯುವ ಧಾರ್ಮಿಕ ಪೂಜಾವಿಧಿಗಳಲ್ಲಿ ರಾಜರ ಭಕ್ತಿ ನಂಬಿಕೆಗಳ ಮೇಲೂ ಬೆಳಕು ಚೆಲ್ಲುತ್ತಾರೆ. ಚಾಮರಾಜಪ್ಪಾಜಿಯವರ ಮಗಳು ಚದುರಂಗದಾಟದಲ್ಲಿ ಕಾಬೂಲಿನರಸನನ್ನೇ ಸೋಲಿಸಿದ ಕಥೆಯಲ್ಲಿ ಆಕೆಯ ಬಗ್ಗೆ ಅಭಿಮಾನ ಮೂಡುತ್ತದೆ. ಮೈಸೂರು ಮಹಾರಾಜರ ದಿಟ್ಟ ತೀರ್ಮಾನ ಹಾಗೂ ತ್ಯಾಗದ ಪ್ರತೀಕವಾಗಿದೆ ಕನ್ನಂಬಾಡಿ ಕಟ್ಟೆ .
ಚಾಮರಾಜ ಒಡೆಯರಿಗೆ ಸಿಡುಬು ರೋಗ ಬಂದ ಸಂದರ್ಭದಲ್ಲಿ, ಮಹಾರಾಣಿ ಲಕ್ಷ್ಮಮ್ಮಣ್ಣಿಯವರ ದಿಟ್ಟ ತೀರ್ಮಾನದಿಂದ ಮೈಸೂರಲ್ಲಿ ಇಂಗ್ಲೀಷ್ ವೈದ್ಯ ಪದ್ಧತಿಯ ಪರಿಚಯವಾಗುತ್ತದೆ. ಅಲ್ಲಿಯವರೆಗೆ ದಕ್ಷಿಣ ಭಾರತದಲ್ಲಿ ಯಾರೂ ಇಂಗ್ಲೀಷ್ ಔಷಧಿಗೆ ತೆರೆದುಕೊಂಡಿರಲಿಲ್ಲ. ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೊದಲ ಬಾರಿಗೆ ವಿಧವಾ ವೇತನ ಜಾರಿಗೆ ಬರುತ್ತದೆ. ನಾಲ್ವಡಿಯವರು ಎಷ್ಟು ಬುದ್ಧಿವಂತರಾಗಿದ್ದರೆಂದೂ ಜ್ಞಾ ನಿಗಳಾಗಿದ್ದರೆಂಬುದಕ್ಕೆ ಅವರೊಮ್ಮೆ ನೀಡಿದ ಕೋರ್ಟಿನ ತೀರ್ಪು ಸಾಕ್ಷಿಯಾಗಿದೆ. ನಾಲ್ವಡಿಯವರು ಸಂಗೀತ ಸಾಗರದ ಒಬ್ಬ ಸಮರ್ಥ ನಾವಿಕರಾಗಿದ್ದರು.
ಮಲೇರಿಯ ಜ್ವರ ಬಂದಾಗ ಸಹಾಯಕ್ಕಾಗಿ ಇಂಗ್ಲಂಡಿನಿಂದ ಬಂದ ವೈದ್ಯ ಕರ್ನಲ್ ಮೆಗ್ಗಾನ್ ಅವರ ನೆನಪಿಗೆ ಜಿಲ್ಲಾ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ನಿರ್ಮಿಸುತ್ತಾರೆ. ಪರ್ಷಿಯದಿಂದ ಬಂದ ಅಲಿ ಅಸ್ಗರ್, ಮೈಸೂರಿನ ರಕ್ಷಣೆ ಮಾಡುತ್ತಾರೆ. ಸರ್ ಜೇಮ್ಸ್ ಡೇವಿಡ್ಸನ್ ಗೋರ್ಡನ್ ರಾಜ್ಯದಲ್ಲಿ ಮೊದಲ ಬಾರಿಗೆ ರೈಲನ್ನು ಪರಿಚಯಿಸಿ 1878ರಲ್ಲಿ ಬೆಂಗಳೂರು- ಮೈಸೂರು ರೈಲು ಮಾರ್ಗವನ್ನು ಹಾಕಿಸುತ್ತಾರೆ. ಗ್ರಾಮೀಣ ನೈರ್ಮಲ್ಯಕ್ಕೆ ಹೆಚ್ಚಿನ ಆಧ್ಯತೆ ನೀಡುವ ನಿಟ್ಟಿನಲ್ಲಿ ಕನ್ನಡಿ ಮತ್ತು ಸೋಪನ್ನು ಮಿರ್ಜಾ ಸಾಹೇಬರೀ ಹಂಚಿ ಅದರ ಬಳಕೆಯ ಮಹತ್ವ ತಿಳಿಸುತ್ತಾರೆ.
ಮುಮ್ಮಡಿ ಕೃಷ್ಣರಾಜ ಒಡೆಯರು ಪ್ರಜೆಗಳನ್ನು ಸಾಮಾನ್ಯ ವರ್ತಕರ ಮೇಲೂ ಪ್ರೀತಿ ಆದರ ಇಟ್ಟಿದ್ದಾರೆಂಬುದಕ್ಕೆ, ಕರ್ತವ್ಯನಿಷ್ಠೆಯನ್ನು ಎಷ್ಟೊಂದು ಮೆಚ್ಚಿಕೊಳ್ಳುತ್ತಾರೆಂಬುದಕ್ಕೆ ಭುಜಂಗರಾವ್ ಹಾಗೂ ಅಂಚೆಪೇದೆ ಬಸಪ್ಪನ ಮೂರ್ತಿಗಳೇ ಸಾಕ್ಷಿ. ರೆವೆನ್ಯು, ಪೋಲಿಸ್, ಪೋಸ್ಟ್, ಮಿಲಿಟರಿ ನ್ಯಾಯಾಂಗ ಹೀಗೆ ಹಲವು ಮುಖ್ಯ ಮಜಲುಗಳನ್ನು ರಾಜ್ಯದಲ್ಲಿ ಪರಿಚಯಿಸಿದ ಕೀರ್ತಿ ಸರ್ ಮಾರ್ಕ್ ಕಬ್ಬನ್ ಅವರದ್ದು. ಇಂತಹ ಸಜ್ಜನರ ಹೆಸರುಗಳು ಮೈಸೂರಿನ ರಸ್ತೆಗಳಿಗೆ, ಪಾರ್ಕ್ ಗಳಿಗೆ, ಸ್ಥಳಗಳಿಗೆ ಅವರ ಸ್ಮರಣಾರ್ಥ ಇರಿಸಲಾಗಿದೆ.
ನವರತ್ನಗಳೆಂದರೆ ನಮಗೆ ನೆನಪಾಗುವುದು ಉಂಗುರದಲ್ಲಿ ಕೂಡಿಸಿರುವ ಕಲ್ಲು. ಆದರೆ, ಮೈಸೂರಿಗೆ ಸಂಬಂಧಿಸಿದಂತೆ ಭೂಷಾರತ್ನ, ದೇಶರತ್ನ ದಾನರತ್ನ, ಪ್ರತಿಷ್ಟಾರತ್ನ ಉಪಕಾರರ ರತ್ನ, ಧರ್ಮರತ್ನ ಕೀರ್ತಿರತ್ನ, ಸಾರಸ್ವತರತ್ನಗಳೇ ಒಂಭತ್ತು ವಿಧದ ರತ್ನಗಳು.
ದಿವಾನ್ ಪೂರ್ಣಯ್ಯನವರು ಸರ್ ಎಂ ವಿಶ್ವೇಶ್ವರಯ್ಯ, ನೃತ್ಯ ಕಲಾವಿದೆ ಬನ್ನೂರು ಲಕ್ಷ್ಮಿ ಮೊದಲಾದವರು ತಮ್ಮ ರಾಜರ ಮೇಲಿಟ್ಟ ಪ್ರೀತಿ ನಂಬಿಕೆ ಗೌರವ ಅಭಿಮಾನಕ್ಕೆ ನಿದರ್ಶನಗಳನ್ನು ನೀಡುವಲ್ಲಿ ಅವರ ಸರಳತೆ ಸಜ್ಜನಿಕೆ ಗಮನಾರ್ಹವಾದದ್ದು.
ಜಯಚಾಮರಾಜೇಂದ್ರ ಒಡೆಯರ ಕಾಲದಲ್ಲಿ ಸ್ವಾಮಿ ವಿವೇಕಾನಂದರ ಸಲಹೆಯಂತೆ ಮೈಸೂರಲ್ಲಿ ಮೊದಲ ಬಾರಿಗೆ 1818ರಲ್ಲಿ ಮಹಿಳೆಯರಿಗೆಂದೇ ಮಹಾರಾಣಿ ಕಾಲೇಜು ಪ್ರಾರಂಭವಾಯಿತು.
ಚರಿತ್ರೆಯ ಪುಟಗಳಲ್ಲಿ ದಾಖಲಿಸದೆ ಉಳಿಸಿದ ಇಂಥ ಅದೆಷ್ಟೋ ವಿಷಯಗಳನ್ನು ಲೇಖಕರು ಈ ಪುಸ್ತಕದಲ್ಲಿ ಉಲ್ಲೇಖಿಸಿರುವುದು ಶ್ಲಾಘನೀಯ. ಇಲ್ಲಿನ
ಹಲವು ಕಥೆಗಳು ವಿಷಯಗಳು ಕುತೂಹಲ ಕೆರಳಿಸುತ್ತಾ, ಆಸಕ್ತಿ ಮೂಡಿಸುತ್ತಾ ಓದಿಸಿಕೊಂಡು ಹೋಗುತ್ತವೆ. ಎಲ್ಲಿಯೂ ಬೇಸರವಾಗದಂತೆ ಇಲ್ಲಿನ ಬರಹಗಳಿಗೆ ಓದುಗರನ್ನು ಹಿಡಿದಿಡುವ ಶಕ್ತಿಯೂ ಇದೆ.
ಬರಹ: ಚೇತನಾ ಕುಂಬ್ಳೆ




