ಬದಿಯಡ್ಕ: ನವದೆಹಲಿಯ ದೆಹಲಿ ಕರ್ನಾಟಕ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮಂಗಳೂರು ಸಹಯೋಗದಲ್ಲಿ ಅಂತರ್ ರಾಜ್ಯ ಮಟ್ಟದ ಚುಟುಕು ಕವನ, ದೇಶಪ್ರೇಮ, ಪರಿಸರ ಪ್ರೇಮ, ಯೋಗ ಜಾಗೃತಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಅ.13 ರಿಂದ ನವದೆಹಲಿಯ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಅಪರಾಹ್ನ 3.30 ರಿಂದ ಆಯೋಜಿಸಲಾಗಿದೆ.
ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್ ಅರಸ್ ಮೈಸೂರು ಅವರು ಅಧ್ಯಕ್ಷತೆ ವಹಿಸುವ ಸಮಾರಂಭವನ್ನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಜಿ.ಹೆಗಡೆ ಉದ್ಘಾಟಿಸುವರು. ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಧ್ವಜಾರೋಹಣಗೈಯ್ಯುವರು. ಯೋಧ ಸೋಮಶೇಖರ ನವದೆಹಲಿ ಅವರು ಅಮರ ಯೋಧರ ಸ್ಮರಣೆ ಮಾಡುವರು. ಶಿಕ್ಷಕ, ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಆಶಯ ಭಾಷಣ ಮಾಡುವರು. ಸಾಹಿತಿ, ಪತ್ರಕರ್ತ ಜಯಾನಂದ ಪೆರಾಜೆ ಪ್ರಾಸ್ತಾವಿಕವಾಗಿ ಮಾತನಾಡುವರು. ನಿವೃತ್ತ ಯೋಧ, ದ.ಕ.ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ತಾರಾನಾಥ ಬೋಳಾರ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಡಾ.ಅಮೃತ ಸಿಂಧು ರಚಿಸಿರುವ ನಮ್ಮೊಳಗಿನ ನಾವು ಕೃತಿಯನ್ನು ಸಾಹಿತಿ ಡಾ.ಅವನೀಂದ್ರನಾಥ ರಾವ್ ಬಿಡುಗಡೆಗೊಳಿಸುವರು.
ಉದ್ಘಾಟನಾ ಸಮಾರಂಭದ ಬಳಿಕ ನಡೆಯಲಿರುವ ಚುಟುಕು ಸಾಹಿತ್ಯೋತ್ಸವ ನಡೆಯಲಿದ್ದು, ಹಿರಿಯ ಸಾಹಿತಿ, ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಸಂಚಾಲಕ ವೇದಮೂರ್ತಿ ಎಂ.ಜನಾರ್ದನ ವಾಸುದೇವ ಭಟ್ ಅಧ್ಯಕ್ಷತೆ ವಹಿಸುವರು. ನವದೆಹಲಿ ಜೆಎನ್‍ಯು ವಿವಿಯ ಕನ್ನಡ ಅಧ್ಯಯನ ವಿಭಾಗ ಮುಖ್ಯಸ್ಥ ಪ್ರೊ.ಪುರುಷೋತ್ತಮ ಬಿಳಿಮಲೆ, ಸಾಹಿತಿ ವಸಂತ ಶೆಟ್ಟಿ ಬೆಳ್ಳಾರೆ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಹರೀಶ್ ಸುಲಾಯ ಒಡ್ಡಂಬೆಟ್ಟು, ಜಯಾನಂದ ಪೆರಾಜೆ, ಸವಿ ಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಕಾಸರಗೋಡು ಸಂಘಟನೆಯ ಸಂಚಾಲಕ ಸುಭಾಶ್ ಪೆರ್ಲ, ಯೋಗಗುರು ಡಾ.ಎಂ.ಜಗದೀಶ ಶೆಟ್ಟಿ ಬಿಜೈ, ಪರಿಸರ ಪ್ರೇಮಿ ಮಾಧವ ಉಳ್ಳಾಲ, ಕೌಸ್ತುಭ ಮಾಸಪತ್ರಿಕೆಯ ಸಂಪಾದಕಿ ಡಾ.ರತ್ನಾ ಹಾಲಪ್ಪ ಗೌಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ನಡೆಯಲಿರುವ ಚುಟುಕುಗೋಷ್ಠಿಯಲ್ಲಿ ನಾಡಿನ ಉದ್ದಗಲದ ಕವಿಗಳು ಸ್ವರಚಿತ ಚುಟಕುಗಳನ್ನು ವಾಚಿಸುವರು.
ಕಾಸರಗೋಡು ಜಿಲ್ಲೆಯ ಪ್ರಮೀಳಾ ಚುಳ್ಳಿಕ್ಕಾನ, ಪ್ರಭಾವತಿ ಕೆದಿಲಾಯ, ಪ್ರೇಮಾ ಉದಯಕುಮಾರ್, ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ,ಡಾ.ಅಪರ್ಣಾ ಆಳ್ವ ಎನ್, ಹರೀಶ್ ಸುಲಾಯ ಒಡ್ಡಂಬೆಟ್ಟು, ಸುಭಾಶ್ ಪೆರ್ಲ, ಆನಂದ ಪೆರ್ಲ, ಬದ್ರುದ್ದೀನ್ ಕುಳೂರು,ಅಭಿಲಾಷ್ ಪೆರ್ಲ ಮೊದಲಾದವರು ಕವನ ವಾಚಿಸುವರು. ಬಳಿಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಮಾರಂಭದಲ್ಲಿ ಪಾಲ್ಗೊಳ್ಳುವ ಕಾಸರಗೋಡಿನ ಸಾಹಿತಿಗಳ ತಂಡ ಬುಧವಾರ ಸಂಜೆ ನವದೆಹಲಿಗೆ ಪ್ರಯಾಣಿಸಿದ್ದು, ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ನೇತೃತ್ವ ವಹಿಸಿರುವರು.





