ಮಂಜೇಶ್ವರ: ಕಳೆದ ಹಲವಾರು ತಿಂಗಳಿನಿಂದ ನರಕ ಯಾತನೆಯನ್ನು ಅನುಭವಿಸುತ್ತಿದ್ದ ತಲಪಾಡಿ ಕಾಸರಗೋಡು ರಾ. ಹೆದ್ದಾರಿ ರಸ್ತೆಯನ್ನು ಹೊಂಡ ತುಂಬಿಸಿ ಮೆಕ್ಕಾಡಾಂ ಡಾಮಾರೀಕರಣಗೊಳಿಸಲು ಸುಮಾರು ಹನ್ನೆರಡು ಕೋಟಿ ರೂ. ವೆಚ್ಚದಲ್ಲಿ ಸರ್ಕಾರ ಗುತ್ತಿಗೆದಾರನಿಗೆ ಗುತ್ತಿಗೆಯನ್ನು ನೀಡಿ ತಿಂಗಳುಗಳೇ ಕಳೆದರೂ ಬುಧವಾರ ಬೆಳಿಗ್ಗೆ ಗಡಿಪ್ರದೇಶವಾದ ತಲಪಾಡಿಗೆ ಕಾರ್ಮಿಕರೊಂದಿಗೆ ಆಗಮಿಸಿದ ಗುತ್ತಿಗೆದಾರ ಸಂಪೂರ್ಣವಾಗಿ ಕಳಪೆ ಕಾಮಗಾರಿಯಾಯನ್ನು ಆರಂಭಿಸಿದಾಗ ಸ್ಥಳೀಯರು ಕಾರ್ಮಿಕನನ್ನು ಹಾಗು ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿಗೆ ತಡೆಯೊಡಿದ ಘಟನೆ ಇದರಿಂದ ಕುಪಿತನಾದ ಗುತ್ತಿಗೆದಾರ ತಮ್ಮ ಕಾರ್ಮಿಕರೊಂದಿಗೆ ಸ್ಥಳದಿಂದ ಪರಾರಿಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ಕಾರಣದಿಂದ ಕಾಮಗಾರಿ ಮೊಟಕುಗೊಂಡಿದ್ದು, ಉತ್ತಮ ಗುಣ್ಣಮಟ್ಟದ ಕಾಮಗಾರಿಯನ್ನು ಆರಂಭಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಹೊಂಡ ತುಂಬಿಸುವಲ್ಲಿ ಮಣ್ಣನ್ನು ಅಗೆಯದೇ ಅಲ್ಲಿಂದಲ್ಲಿಗೆ ಜಲ್ಲಿಗಳನ್ನು ಹಾಕಿ ಕಳಪೆ ಕಾಮಗಾರಿ ನಡೆಸಲು ತಯಾರಿ ನಡೆಸುವಾಗಲೇ ಸ್ಥಳೀಯರು ಒಗ್ಗಟ್ಟಾಗಿ ತಡೆ ಹಿಡಿದಿದ್ದಾರೆ. ಊರವರ ಕಣ್ಣಿಗೆ ಮಣ್ಣೆರಚಿ ನಡೆಸುವ ಯಾವುದೇ ಕಳಪೆ ಕಾಮಗಾರಿಯನ್ನು ನಡೆಸಲು ಬಿಡಲಾರೆವು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ಮಂಜೇಶ್ವರ ಪೊಲೀಸ್ ಅಧಿಕಾರಿಗಳು ಆಗಮಿಸಿ ಸಂಘರ್ಷವನ್ನು ತಪ್ಪಿಸಿ ಸರಿಯಾದ ರೀತಿಯಲ್ಲಿ ಕಾಮಗಾರಿಯನ್ನು ನಡೆಸುವಂತೆ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದ್ದಾರೆ.





