ಕುಂಬಳೆ: ಮುಳ್ಳೇರಿಯಾ ಮಂಡಲಾಂತರ್ಗತ ಚಂದ್ರಗಿರಿ ವಲಯ ಹವ್ಯಕ ಸಭೆಯು ವಿಧ್ಯಾರ್ಥಿವಾಹಿನೀ ಪ್ರಧಾನರಾದ ಅಂಬೆಮೂಲೆ ಘಟಕದ ಅಮ್ಮಂಕಲ್ಲು ಬಾಲಕೃಷ್ಣ ಭಟ್ ಅವರ ನಿವಾಸದಲ್ಲಿ ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಇತ್ತೀಚೆಗೆ ಜರಗಿತು.
ವಲಯಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಮೀನಗದ್ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಲಯ ಕಾರ್ಯದರ್ಶಿ ಗಣೇಶ್ ಶರ್ಮ ಕುಂಜತ್ತೋಡಿ ಗತ ಸಭೆಯ ಸವಿವರವಾದ ವರದಿ ಮಂಡಿಸಿದರು.
ವಲಯ ಕೋಶಾಧಿಕಾರಿ ವಿನೋದ ಮರದಮೂಲೆ ಲೆಕ್ಕಪತ್ರ ಮಂಡಿಸಿದರು. ವಲಯ ಮಾತೃ ಪ್ರಧಾನೆ ಗೀತ ದಿನೇಶ್ ಮಾತೃತ್ವಮ್, ಕುಂಕುಮಾರ್ಚನೆ, ಮುಷ್ಟೀ ಭಿಕ್ಷೆ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ ಪಾರಾಯಣದ ಕುರಿತು ಮಾಹಿತಿ ನೀಡಿದರು. ಶಾಸನ ತಂತ್ರದ ಭದ್ರಭವಿಷ್ಯ ಸಂಯೋಜಕ ನವನೀತಪ್ರಿಯ ಕೈಪಂಗಳ ಅವರು ಸಂಧ್ಯಾವಂದನೆ, ಗಾಯತ್ರೀ ಜಪದ ಮಹತ್ವದ ಕುರಿತು ಉಪನೀತರಾದವರು ಇದನ್ನು ಅನುಷ್ಠಾನಗೊಳಿಸಬೇಕಾದ ಮಹತ್ವದ ಕುರಿತು ತಿಳಿಸಿದರು. ಬಳಿಕ ವಿಭಾಗವಾರು ವರದಿ ಮಂಡಿಸಲಾಯಿತು.
ವಲಯದ 42ನೇ ಪ್ರತಿರುದ್ರ ಪಾರಾಯಣವು ಕೋಡಿ ಕೃಷ್ಣ ಕುಮಾರ ಭಟ್ ಅವರ ನೇತೃತ್ವದಲ್ಲಿ 15 ಮಂದಿ ರುದ್ರಾಧ್ಯಾಯಿಗಳ ಸಹಕಾರದೊಂದಿಗೆ, ಮಾತೆಯರಿಂದ ಲಕ್ಷ್ಮೀ ಕರಾವಲಂಬನ ಸ್ತ್ತೋತ್ರ ಪಾರಾಯಣ ಕಾಮಲ ವೆಂಕಟ್ರಮಣ ಭಟ್ ಅವರ ಮನೆಯಲ್ಲಿ ವಲಯ ವೈದಿಕ ಪ್ರಧಾನರಾದ ನರಸಿಂಹರಾಜ ಪಯ ಇವರ ಮಾರ್ಗದರ್ಶನದಲ್ಲಿ ಜರಗಿತು.
ಮಂಡಲ ಶಿಷ್ಯ ಮಾಧ್ಯಮ ಪ್ರಧಾನ ಗೋವಿಂದ ಬಳ್ಳಮೂಲೆ ಅವರು ಧರ್ಮಭಾರತೀ ಪತ್ರಿಕೆ ಚಂದಾ ನವೀಕರಣ, ಕಾಮದುಘಾ ಯೋಜನೆ, ವಿಳಾಸದ ಲೋಪದೋಷಗಳನ್ನು ಸರಿಪಡಿಸುವ ಕುರಿತು ಮಾಹಿತಿ ನೀಡಿದರು. ರಾಮ ತಾರಕ ಮಂತ್ರ, ಶಾಂತಿ ಮಂತ್ರ, ಧ್ವಜಾವತರಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.





