ಕಾಸರಗೋಡು: ಮಾತೃಭಾಷೆಯ ಅಭಿಮಾನ, ಆಂತರ್ಯದ ಪ್ರೀತಿಗಿಂತ ಮಿಗಿಲಾದ ಪ್ರೇಮ ಬೇರೊಂದಿಲ್ಲ. ಸಾಮಾಜಿಕ, ಆರ್ಥಿಕವಾಗಿ ಜಾಗತಿಕ ಮಟ್ಟದ ವ್ಯಕ್ತಿತ್ವದವರಾದರೂ ಅವರೊಳಗೆ ಭಾವಣೆ ಹುಟ್ಟಿಕೊಳ್ಳುವುದು, ಹೃದಯ ಸಂಭಾಶಿಸುವುದು ಮೊದಲು ತನ್ನ ಮಾತೃಭಾಷೆಯಲ್ಲೇ ಆಗಿರುತ್ತದೆ. ಈ ಕಾರಣದಿಂದ ಮಾತೃಭಾಷೆಯ ಸ್ಥಾನ ಹೆತ್ತ ಮಾತೆಯಷ್ಟೇ ಮಹತ್ವಪೂರ್ಣವಾದುದು ಎಂದು ಕರ್ನಾಟಕ ಸರ್ಕಾರದ ಕರ್ನಾಟಕ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಹಾಗೂ ಕೈರಳಿ ಪ್ರಕಾಶನ ಸುಬ್ಬಯ್ಯಕಟ್ಟೆ ಜಂಟಿ ಆಶ್ರಯದಲ್ಲಿ ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮತ್ತು ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಖಜಾಂಜಿ, ಪತ್ರಕರ್ತ ರವಿ ನಾಯ್ಕಾಪು ಬರೆದಿರುವ ಸ್ನೇಹಗಂಗೆ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕರ್ನಾಟಕದೊಳಗೆ ಇಂದು ಕನ್ನಡ ಭಾಷೆ, ಸಂಸ್ಕøತಿಯ ಬಗೆಗೆ ತೀವ್ರ ನಿರಾಸಕ್ತಿ ಕಂಡುಬರುತ್ತಿದೆ. ಆದರೆ ಸದಾ ಜಾಗರೂಕರಾಗಿರುವ ಗಡಿನಾಡು, ಹೊರನಾಡಿನ ಕನ್ನಡಿಗರಲ್ಲಿ ಭಾಷಾ ಪ್ರೇಮ, ತುಡಿತಗಳು ಜಿನುಗುತ್ತಿರುತ್ತವೆ. ಈ ಕಾರಣದಿಂದ ಕನ್ನಡ ಇಂದಿಗೂ ಶ್ರೀಮಂತವಾಗಿದೆ ಎಂದು ತಿಳಿಸಿದರು. ವ್ಯಕ್ತಿಯೊಬ್ಬ ಶಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಲ್ಲಿ ಜೀವನವನ್ನು ಸೇವಾ ದಿಶೆಯಲ್ಲಿ ತೊಡಗಿಸಿಕೊಳ್ಳುವಂತಹ ತಪಸ್ಸಿಗೆ ತೆರೆದುಕೊಳ್ಳಬೇಕಾಗುತ್ತದೆ. ಸಂಕಷ್ಟದಲ್ಲಿರುವವರ ಪಾಲಿಗೆ ಭಗವಂತನಾಗಿ ಮುನ್ನಡೆಸುವ ಸಾಧಕರ ಜೀವನ ಚಿತ್ರಣವನ್ನು ತೆರೆದಿಡುವ ಸ್ನೇಹಗಂಗೆಯಂತಹ ಕೃತಿ ಭವಿಷ್ಯದ ಸಮಾಜಕ್ಕೆ ಮಾರ್ಗದರ್ಶಿ ಎಂದು ಅವರು ತಿಳಿಸಿದರು.
ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತೃಭಾಷೆ, ಸಂಸ್ಕøತಿಗಳ ನೆನಪಿಸುವಿಕೆ, ಮಹತ್ವದ ಅರಿವಿನ ವಿಸ್ತಾರತೆಗಳಿಗೆ ಇಂತಹ ಉತ್ಸವಗಳು ಮನೆಮನಗಳಲ್ಲಿ ನಡೆಯುತ್ತಿರಬೇಕು. ಸವಾಲುಗಳ ಮಧ್ಯೆ ಗಡಿನಾಡಿನ ಕನ್ನಡ ಭಾಷಿಕರ ಕಳಕಳಿ ಅನನ್ಯವಾದುದು. ಈ ಹಿನ್ನೆಲೆಯಲ್ಲಿ ಮುಂಚೂಣಿಯಲ್ಲಿರುವ ಸಂಘಟನೆಗಳೊಂದಿಗೆ ಕೈಜೋಡಿಸುವ ಮೂಲಕ ನಮ್ಮದಾದ ಕೊಡುಗೆ ನೀಡುವಲ್ಲಿ ಪ್ರತಿಯೊಬ್ಬರೂ ಜೊತೆಯಾಗಬೇಕು ಎಂದು ಕರೆನೀಡಿದರು.
ಸಮಾರಂಭದಲ್ಲಿ ಬಿಡುಗಡೆಗೊಳಿಸಲಾದ ಕೃತಿಯ ಬಗ್ಗೆ ವಿದ್ಯಾ ಗಣೇಶ್ ಅಣಂಗೂರು ಪರಿಚಯ ನೀಡಿದರು.ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಸಂಘಟಕ ಸತೀಶ ಅಡಪ ಸಂಕಬೈಲು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಯಕ್ಷಗಾನ ಗುರು ಜಯರಾಮ ಪಾಟಾಳಿ ಪಡುಮಲೆ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಸಂಘಟಕ ಝಡ್.ಎ.ಕಯ್ಯಾರ್, ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ,ರವಿ ನಾಯ್ಕಾಪು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಲಾಯಿತು. ನ್ಯಾಯವಾದಿ ಅಡೂರು ಉಮೇಶ ನಾಯ್ಕ್(ಕನ್ನಡ ಸೇವೆ), ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ(ಯಕ್ಷಗಾನ), ಶಿವರಾಮ ಕಾಸರಗೋಡು(ಕನ್ನಡ ಸಂಘಟನೆ), ವೇಣುಗೋಪಾಲ ಶೇಣಿ(ಪತ್ರಿಕಾ ರಂಗ), ರಾಘವನ್ ಬೆಳ್ಳಿಪ್ಪಾಡಿ(ಸಹಕಾರ), ಟಿ.ವಿ.ರಮೇಶ್ ಮಡಿಕೇರಿ(ಸಾಹಿತ್ಯ), ಮುಹಮ್ಮದ್ ಬಡ್ಡೂರು(ಸಾಹಿತ್ಯ), ಜೋಸೆಫ್ ಕ್ರಾಸ್ತಾ(ಸಮಾಜಸೇವೆ), ಡಾ.ಮೀನಾಕ್ಷಿ ರಾಮಚಂದ್ರ(ಶಿಕ್ಷಣ), ಡಾ.ವಿರಾಲ್ ಶಂಕರ ಶೆಟ್ಟಿ(ಸಮಾಜಸೇವೆ), ಎಸ್.ಟಿ.ಕರ್ಕೇರ(ಜಾನಪದ), ಹಾಗೂ ಸಂಘಟನೆಗಳಾದ ನೇತಾಜಿ ಗ್ರಂಥಾಲಯ ಪೆರ್ಲ, ಮಣಿಮುಂಡ ಎಜ್ಯುಕೇಶನ್ ಸೊಸೈಟಿ ಉಪ್ಪಳ, ಶುಭದ ಎಜ್ಯುಕೇಶನ್ ಟ್ರಸ್ಟ್ ನಾವುಂದ ಗೌರವಾಭಿನಂದನೆಗಳನ್ನು ಸಲ್ಲಿಸಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಯಕ್ಷಪ್ರತಿಭೆ, ಪೆರ್ಲದ ದಿ.ಪಡ್ರೆಚಂದು ಸ್ಮಾರಕ ಯಕ್ಷಗಾನ ಕೇಂದ್ರದ ವಿದ್ಯಾರ್ಥಿ ಚಿತ್ತರಂಜನ್ ಕಡಂದೇಲು ಆರಂಭಿಸಲಿರುವ ಯಕ್ಷಗಾನ ಅಭಿಯಾನಕ್ಕೆ ಡಿ.ಎಸ್.ಅರುಣ್ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು. ನ್ಯಾಯವಾದಿ ಥೋಮಸ್ ಡಿ ಸೋಜ, ಬಾಲಕೃಷ್ಣ ಅಗ್ಗಿತ್ತಾಯ, ಸಂಧ್ಯಾಗೀತಾ ಬಾಯಾರು ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.
ಅಕಾಡೆಮಿ ಗೌರವಾಧ್ಯಕ್ಷ ಸಂಕೀರ್ತನಕಾರ ಜಯಾನಂದಕುಮಾರ್ ಹೊಸದುರ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ವಂದಿಸಿದರು. ವಿದ್ಯಾ ಗಣೇಶ್ ಅಣಂಗೂರು ಕಾರ್ಯಕ್ರಮ ನಿರೂಪಿಸಿದರು.



