ಬದಿಯಡ್ಕ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ಒಂದೇ ಸೂರಿನಡಿಯಲ್ಲಿ ಜನತೆಗೆ ತಲುಪಿಸುವ ಉದ್ದೇಶದೊಂದಿಗೆ ಬದಿಯಡ್ಕದಲ್ಲಿ ಜನಸೇವಾ ಕೇಂದ್ರವು ಶುಕ್ರವಾರ ಪ್ರಾರಂಭವಾಯಿತು.
ಇಲ್ಲಿನ ಮೇಲಿನ ಪೇಟೆಯಲ್ಲಿರುವ ಶ್ರೀಕೃಷ್ಣ ಭವನ ಸಂಕೀರ್ಣದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ದೀಪಬೆಳಗಿಸಿ ಚಾಲನೆಯನ್ನು ನೀಡಿ ಮಾತನಾಡಿ ಬದಿಯಡ್ಕದ ಹೃದಯಭಾಗದಲ್ಲಿ ಜನರ ಸೇವೆಗಾಗಿ ಆರಂಭವಾದ ಈ ಸಂಸ್ಥೆಯ ಮೂಲಕ ಜನತೆಗೆ ಅನುಕೂಲವಾಗಲಿ. ಡಿಜಿಟಲ್ ಇಂಡಿಯಾ ಯೋಜನೆಗೆ ಎಲ್ಲರೂ ಹೊಂದಿಕೊಳ್ಳಬೇಕಿದ್ದು, ಕ್ಲಪ್ತ ಸಮಯಕ್ಕೆ ಜನರಿಗೆ ಸಮರ್ಪಕವಾದ ಸೇವೆಯನ್ನು ನೀಡುವ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಆಶಿಸಿದರು. ಬದಿಯಡ್ಕ ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್ ಮಾತನಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಈ ಸಂಸ್ಥೆಯಿಂದ ನಮ್ಮೂರಿನ ಜನತೆಗೆ ಅನುಕೂಲವಾಗಲಿದೆ ಎಂದರು. ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಅವಿನಾಶ್ ರೈ, ಗ್ರಾ.ಪಂ. ಸದಸ್ಯೆ ರಾಜೇಶ್ವರಿ, ಗ್ರಾಪಂ ಸದಸ್ಯರುಗಳಾದ ಡಿ.ಶಂಕರ, ಮುನೀರ್, ವಿಶ್ವನಾಥ ಪ್ರಭು ಕರಿಂಬಿಲ, ಕೆ.ಬಾಲಕೃಷ್ಣ ಶೆಟ್ಟಿ ಕಡಾರು, ಸಂಸ್ಥೆಯ ಪಾಲುದಾರರಾದ ಅನ್ನಪೂರ್ಣ ಪ್ರಸಾದ್ ಬದಿಯಡ್ಕ ಶುಭಹಾರೈಸಿದರು. ಹರೀಶ್ ನಾರಂಪಾಡಿ ಸ್ವಾಗತಿಸಿ, ಜನಾರ್ಧನ ವಂದಿಸಿದರು.
ಜನರಿಗೆ ಲಭಿಸುವ `ಡಿಜಿಟಲ್ ಇಂಡಿಯಾ' ಸೇವೆಗಳು :
ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ಅದಕ್ಕಿರುವ ಅರ್ಜಿ ನಮೂನೆಗಳು, ಓನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವಿಕೆ, ಪಾಸ್‍ಪೋರ್ಟ್, ವೋಟರ್ ಐಡಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಆದಾಯ ತೆರಿಗೆ, ಮದುವೆ ನೊಂದಾವಣೆ, ವಿಲೇಜ್ ಆಫೀಸ್ ಸೇವೆಗಳು, ಮೋಟಾರು ವಾಹನ ಇಲಾಖೆ, ಲೈಫ್ ಸರ್ಟಿಫಿಕೇಟ್, ವಿವಿಧ ರೀತಿಯ ಸ್ಕಾಲರ್ ಶಿಪ್, ವಿಶ್ವವಿದ್ಯಾನಿಲಯಗಳ ಶುಲ್ಕ ಪಾವತಿ, ಕೃಷಿಭವನ, ಪ್ರವಾಸೋಧ್ಯಮ, ಬಸ್, ರೈಲು, ವಿಮಾನ ಟಿಕೇಟ್ ಹಾಗೂ ಇನ್ನಿತರ ಎಲ್ಲಾ ತರದ ಸರ್ಕಾರೀ ಸೇವೆಗಳ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದಾಗಿದೆ.




