ಉಪ್ಪಳ: ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಬ್ರಹ್ಮಕಲಶೋತ್ಸವದ "ಕಾಸರಗೋಡು ಜಿಲ್ಲಾ ಸಮಿತಿ" ರೂಪೀಕರಣ ಸಭೆ ಭಾನುವಾರ ನಡೆಯಿತು.
ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದ ಕಟೀಲಿನ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣರವರು ಬ್ರಹ್ಮಕಲಶೋತ್ಸವದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಕೈಗೊಂಡ "ಕೋಟಿ ಜಪಯಜ್ಞ" ಅಭಿಯಾನದ ಮಾಹಿತಿ ನೀಡಿದರು. ಡಿ.15. ಭಾನುವಾರ ಬೆಳಿಗ್ಗೆ 9.30ಕ್ಕೆ ಶ್ರೀಸನ್ನಿಧಿಯಲ್ಲಿ ಜಪಯಜ್ಞ ಅಭಿಯಾನದ ಅನುಷ್ಠಾನ ಮಾಡುವವರಿಗೆ ಸಂಕಲ್ಪ ಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಕಟೀಲಿಗೆ ಆಗಮಿಸಬೇಕೆಂದು ಅವರು ಕರೆನೀಡಿದರು. ಈ ಅಭಿಯಾನ ಸಮಾಪ್ತಿಯು ಮುಂದಿನ ಫೆಬ್ರವರಿ 3 ರಂದು ನಡೆಯಲಿದ್ದು ಅಂದು ಬ್ರಹ್ಮಾರ್ಪಣ ಮಾಡಿ ಪ್ರಸಾದ ನೀಡಲಾಗುವುದು ಎಂದರು.
ಕೊಂಡೆವೂರಿನ ಬೆಳವಣಿಗೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡ ಆಸ್ರಣ್ಣನವರ ನೇತೃತ್ವದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ನಾವೆಲ್ಲರೂ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕೆಂದು ಶ್ರೀ ಯೋಗಾನಂದ ಸರಸ್ವತೀ ಸ್ವಾಮಿಜಿಯವರು ಕರೆನೀಡಿ ಕಟೀಲು ಬ್ರಹ್ಮಕಲಶೋತ್ಸವ ಕಾಸರಗೋಡು ಜಿಲ್ಲಾ ಸಮಿತಿಯ ಘೋಷಣೆ ಮಾಡಿದರು. ಗೌರವಾಧ್ಯಕ್ಷ ನಾರಾಯಣ ಹೆಗ್ಡೆ ಐಲ, ಗೌರವ ಕಾರ್ಯದರ್ಶಿ ಶ್ರೀಧರ ಶೆಟ್ಟಿ ಮುಟ್ಟ ಮತ್ತು ಪಿ.ಆರ್.ಶೆಟ್ಟಿ ಪೊಯ್ಯೆಲು, ಅಧ್ಯಕ್ಷರಾಗಿ ಡಾ. ಶ್ರೀಧರ ಭಟ್ ಉಪ್ಪಳ, ಕಾರ್ಯಾಧ್ಯಕ್ಷರಾಗಿ ನ್ಯಾಯವಾದಿ ಶ್ರೀಕಾಂತ್ ಕಾಸರಗೋಡು, ಚೇತನಾ ಕಾಸರಗೋಡು, ಶ್ರೀಕೃಷ್ಣ ಶಿವಕೃಪ ಕುಂಜತ್ತೂರು, ಪ್ರಧಾನ ಕಾರ್ಯದರ್ಶಿಗಳಾಗಿ ಹರೀಶ್ ಮಾಡ, ಮೀರಾವತಿ ಆಳ್ವ, ಕೋಶಾಧಿಕಾರಿಯಾಗಿ ಶಶಿಧರ ಶೆಟ್ಟಿ ಗ್ರಾಮಚಾವಡಿ ಮತ್ತು ಉಳಿದ ಪದಾಧಿಕಾರಿಗಳನ್ನು,ಸದಸ್ಯರನ್ನೂ ಘೋಶಿದರಲ್ಲದೆ ಈ ಸಭೆಯಲ್ಲಿರುವ ಸಮಸ್ತರೂ ಸದಸ್ಯರೇ ಎಂದು ಪೂಜ್ಯರು ಉದ್ಘೋಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಟೀಲು ಬ್ರಹ್ಮಕಲಶೋತ್ಸವ ಪ್ರಧಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ದೇವಸ್ಯ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ನ್ಯಾಯವಾದಿ ಕೆ. ಶ್ರೀಕಾಂತ್ ಕಾಸರಗೋಡು, ಡಾ.ಶ್ರೀಧರ ಭಟ್, ಚೇತನ, ಶ್ರೀಧರ ಶೆಟ್ಟಿ ಮುಟ್ಟ ಮತ್ತು ಪಿ.ಆರ್.ಶೆಟ್ಟಿ ಪೊಯ್ಯೆಲು ರವರು ಮಾತನಾಡಿದರು. ಕು.ಗಾಯತ್ರೀ ಕೊಂಡೆವೂರು ಪ್ರಾರ್ಥನೆ ಹಾಡಿದರು. ಅಶೋಕ್ ಬಾಡೂರು ಸ್ವಾಗತಿಸಿ, ಹರೀಶ್ ಮಾಡ ವಂದಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು.


